ದೆಹಲಿಯಲ್ಲಿ ಕೊರೊನಾ ಹೆಚ್ಚಳ: ಯೆಲ್ಲೋ ಅಲರ್ಟ್ ಘೋಷಣೆ
ನವದೆಹಲಿ, ಡಿ. ೨೮: ರಾಷ್ಟç ರಾಜಧಾನಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಯೆಲ್ಲೋ ಅಲರ್ಟ್ ಘೋಷಣೆಯು ರಾತ್ರಿ ಕರ್ಫ್ಯೂ, ಶಾಲೆಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡುವುದು, ಸಮ-ಬೆಸ ಆಧಾರದ ಮೇಲೆ ಅನಿವಾರ್ಯವಲ್ಲದ ಅಂಗಡಿಗಳನ್ನು ತೆರೆಯುವುದು. ಮೆಟ್ರೋ ರೈಲುಗಳು ಮತ್ತು ಬಸ್‌ಗಳಲ್ಲಿ ಆಸನ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರ ಪ್ರಯಾಣಿಸಬೇಕು ಎಂಬ ನಿರ್ಬಂಧಗಳನ್ನು ಒಳಗೊಂಡಿದೆ. ಕೋವಿಡ್ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಹೆಚ್ಚಿನ ಜನರು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವುದರಿAದ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು. ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿಯ ಪ್ರಮಾಣ ಸತತ ಎರಡು ದಿನಗಳಿಂದ ಏರಿಕೆಯಾಗುತ್ತಿದೆ.
ಕೋವಿಡ್-೧೯: ಮಾತ್ರೆ, ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಅನುಮೋದನೆ
ನವದೆಹಲಿ, ಡಿ. ೨೮: ಓಮಿಕ್ರಾನ್ ಭೀತಿ ನಡುವೆಯೇ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವೊವ್ಯಾಕ್ಸ್ ಮತ್ತು ಬಯಾಲಾಜಿಕಲ್ ಇ ಸಂಸ್ಥೆಯ ಕೋರ್ಬೆವ್ಯಾಕ್ಸ್ ಕೋವಿಡ್-೧೯ ತಡೆ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದು, ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್-೧೯ ಲಸಿಕೆ ಕೋವೊವಾಕ್ಸ್, ಬಯೋಲಾಜಿಕಲ್ ಇ ಸಂಸ್ಥೆಯ ಕಾರ್ಬೆವಾಕ್ಸ್ ಮತ್ತು ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಅನ್ನು ಕೇಂದ್ರ ಔಷಧ ಪ್ರಾಧಿಕಾರ ಸಿಡಿಎಸ್‌ಸಿಒ ಅನುಮೋದಿಸಿದೆ ಎಂದು ಹೇಳಿದ್ದಾರೆ. ನ್ಯಾನೊಪರ್ಟಿಕಲ್ ಲಸಿಕೆ, ಕೋವೊವಾಕ್ಸ್ ಅನ್ನು ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಲಿದೆ. ಮೊಲ್ನುಪಿರವಿರ್, ಆಂಟಿವೈರಲ್ ಡ್ರಗ್ ಅನ್ನು ಈಗ ದೇಶದಲ್ಲಿ ೧೩ ಕಂಪೆನಿಗಳು ಕೋವಿಡ್-೧೯ನೊಂದಿಗೆ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ಮತ್ತು ರೋಗದ ಪ್ರಗತಿಯ ಹೆಚ್ಚಿನ ಅಪಾಯವನ್ನು ಹೊಂದಿರುವ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ತಯಾರಿಸುತ್ತವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಅನುಮೋದನೆಯೊಂದಿಗೆ, ದೇಶದಲ್ಲಿ ತುರ್ತು ಬಳಕೆಯ ಅಧಿಕಾರವನ್ನು ಪಡೆದಿರುವ ಕೋವಿಡ್ ಲಸಿಕೆಗಳ ಸಂಖ್ಯೆ ೮ಕ್ಕೆ ಏರಿದೆ. ಈ ಹಿಂದೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವಾಕ್ಸಿನ್, ಝೈಡಸ್ ಕ್ಯಾಡಿಲಾದ, ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ಈಗಾಗಲೇ ಭಾರತೀಯ ಔಷಧ ನಿಯಂತ್ರಕದಿAದ ಒಪ್ಪಿಗೆಯನ್ನು ಪಡೆದಿವೆ.
ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ೯ನೇ ಸ್ಥಾನಕ್ಕೆ ಕರ್ನಾಟಕ
ಬೆಂಗಳೂರು, ಡಿ. ೨೮: ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಸಮರೋಪಾದಿಯಲ್ಲಿ ಪ್ರಯತ್ನಿಸುತ್ತಿದೆ. ಆದರೂ ಸೋಮವಾರ ಬಿಡುಗಡೆಯಾದ ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ೯ನೇ ಸ್ಥಾನಕ್ಕೆ ಕುಸಿದಿದೆ. ೨೦೧೮-೧೯ರ ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ೧೬ನೇ ಸ್ಥಾನದಲ್ಲಿತ್ತು. ಈ ವರ್ಷ ೧೯ನೇ ಸ್ಥಾನಕ್ಕೆ ಕುಸಿದಿದೆ ಮತ್ತು ಒಟ್ಟಾರೆ ಸೂಚ್ಯಂಕದಲ್ಲಿ ೮ನೇ ಸ್ಥಾನದಿಂದ ೯ನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕರ್ನಾಟಕವು ತೀವ್ರ ಕುಸಿತವನ್ನು ಕಂಡಿದೆ. ವಿವಿಧ ನಿಯತಾಂಕಗಳಲ್ಲಿ ರಾಜ್ಯದ ಒಟ್ಟಾರೆ ಸ್ಕೋರ್ ೫೯.೨೯ ರಿಂದ ೫೭.೯೩ ಕ್ಕೆ ಕುಸಿದಿದೆ. ದೇಶಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ, ಆರೋಗ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ. ದೊಡ್ಡ ರಾಜ್ಯಗಳ ಆರೋಗ್ಯ ಸೂಚ್ಯಂಕದಲ್ಲೊ ಕೇರಳ ಅತ್ಯುತ್ತಮ ಸಾಧನೆ ತೋರಿ, ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದರೆ ಕರ್ನಾಟಕ ೯ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ನೀತಿ ಆಯೋಗವು ಕಳೆದ ನಾಲ್ಕು ವರ್ಷಗಳಿಂದ ಈ ಸೂಚ್ಯಂಕ ಬಿಡುಗಡೆ ಮಾಡುತ್ತಿದ್ದು, ೨೦೧೯-೨೦ರ ದಾಖಲೆಗಳನ್ನು ಆಧರಿಸಿ ಈಗ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ.
೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
ನವದೆಹಲಿ, ಡಿ. ೨೮: ೬೦ ವರ್ಷಕ್ಕಿಂತ ಮೇಲ್ಪಟ್ಟ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಬೂಸ್ಟರ್ ಡೋಸ್ ಪಡೆಯುವಾಗ ವೈದ್ಯರಿಂದ ಯಾವುದೇ ಪ್ರಮಾಣ ಪತ್ರ ತೋರಿಸುವ ಅಗತ್ಯವಿಲ್ಲ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಈ ಸಂಬAಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎರಡನೇ ಡೋಸ್ ಪಡೆದ ದಿನದಿಂದ ೩೯ ವಾರಗಳು ಅಥವಾ ೯ ತಿಂಗಳು ಪೂರ್ಣಗೊಂಡ ಬಗ್ಗೆ ಕೋ- ವಿನ್ ಪೋರ್ಟಲ್ ನಲ್ಲಿನ ದಾಖಲೆ ಆಧಾರದ ಮೇಲೆ ಅರ್ಹ ಇಂತಹ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬೂಸ್ಟರ್ ಡೋಸ್ ಪಡೆಯಲು ಅರ್ಹರಾದ ಎಲ್ಲಾ ಫಲಾನುಭವಿಗಳಿಗೆ ಕೋವಿನ್ ಸಂದೇಶ ಕಳುಹಿಸಲಿದೆ. ಅದು ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಪ್ರತಿಬಿಂಬಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜೇಶ್ ಭೂಷಣ್ ನೇತೃತ್ವದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಇಂದು ನಡೆದ ವೀಡಿಯೋ ಕಾನ್ಫರೆನ್ಸ್ನಲ್ಲಿ ೧೫ -೧೮ ವರ್ಷದೊಳಗಿನ ಮಕ್ಕಳಿಗೆ ಕೋವಿಡ್-೧೯ ಲಸಿಕೆ ಮತ್ತು ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ೬೦ ವರ್ಷಕ್ಕೂ ಮೇಲ್ಪಟ್ಟ ಇತರ ಅನಾರೋಗ್ಯ ಸಮಸ್ಯೆಗೊಳಗಾದವರಿಗೆ ಬೂಸ್ಟರ್ ಡೋಸ್ ನೀಡಿಕೆ ಕುರಿತಂತೆ ಪರಾಮರ್ಶೆ ನಡೆಸಲಾಯಿತು. ಸದ್ಯ ೧೫-೧೮ ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಮಾತ್ರ ಇದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಲಸಿಕೆ ಕಳುಹಿಸಲಾಗುವುದು, ಮುಂದಿನ ಕೆಲದಿನಗಳಲ್ಲಿ ಲಸಿಕೆ ಕಳುಹಿಸುವ ದಿನಾಂಕಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ರಾಜೇಶ್ ಭೂಷಣ್ ತಿಳಿಸಿದರು. ಜನವರಿ ೩ ರಿಂದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಲಿದ್ದು, ಫಲಾನುಭವಿಗಳು ಜನವರಿ ೧ ರಿಂದ ಕೋವಿನ್ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ೨೦೦೭ಕ್ಕಿಂತ ಹಿಂದೆ ಜನಿಸಿದವರು ಈ ಹಂತದಲ್ಲಿ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅವರು ಹೇಳಿದರು.