ಸಿದ್ದಾಪುರ, ಡಿ. ೨೮: ನಿರಂತರ ಶೋಷಣೆ ದಬ್ಬಾಳಿಕೆ ಗುಲಾಮ ಪದ್ಧತಿಯ ಮೂಲಕ ಶ್ರಮಿಕ ವರ್ಗ ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲೇ ಕಾರ್ಮಿಕ ಚಳುವಳಿಯ ಅಸ್ತಿತ್ವವನ್ನು ಉಳಿಸಿಕೊಂಡು ಹೋರಾಟದ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಕೆ. ಗುಣಶೇಖರ್ ಅಭಿಪ್ರಾಯಪಟ್ಟರು.
ಸಿದ್ದಾಪುರ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆದ ಭಾರತ ಕಮ್ಯುನಿಸ್ಟ್ (ಸಿಪಿಐ) ಪಕ್ಷದ ೯೭ನೇ ಸಂಸ್ಥಾಪನಾ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾಮಾಜಿಕ, ರಾಜಕೀಯ ಬೆಳವಣಿಗೆಯಲ್ಲಿ ದೇಶದ ದುಡಿಯುವ ಜನರ ಬದುಕು ಭವಿಷ್ಯಗಳನ್ನು ಸರಿ ದಿಕ್ಕಿನೆಡೆಗೆ ಮುನ್ನಡೆಸುವಲ್ಲಿ ಮುಂಚೂಣಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಸಿಪಿಐ ಪಕ್ಷ ಶ್ರಮಿಕ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿದೆ
ಜಾತ್ಯತೀತ ನೆಲೆಗಟ್ಟಿನಲ್ಲಿ ಕಾರ್ಮಿಕರು, ರೈತರು, ಶೋಷಿತರ ಪರವಾಗಿ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ಶ್ರಮಿಕ ವರ್ಗಗಳಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಬಂದ ಸರ್ಕಾರಗಳು ಶ್ರಮಿಕ ವರ್ಗಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದು ಕಾರ್ಮಿಕ ವಿರೋಧಿ ಕಾಯಿದೆಗಳನ್ನು ತರುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು. ಬಂಡವಾಳಶಾಹಿಗಳ ಪರವಾಗಿರುವ ಸರ್ಕಾರಗಳ ವಿರುದ್ಧ ದೇಶದಾದ್ಯಂತ ಹೋರಾಟಗಳನ್ನು ರೂಪಿಸ ಲಾಗುತ್ತಿದ್ದು, ಕಾರ್ಮಿಕರ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪ್ರವಾಹ ಸೇರಿದಂತೆ ಬೆಳೆಗಾರರು, ಕಾರ್ಮಿಕರು ಹಾಗೂ ಜನಸಾಮಾನ್ಯರು ಸಂಕಷ್ಟದಲ್ಲಿದ್ದು ನಿವೇಶನ, ಸೂರು, ನೀರು, ವಿದ್ಯುತ್, ರಸ್ತೆ, ಬೆಳೆಹಾನಿ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಜನಪ್ರತಿನಿಧಿಗಳಾಗಿರುವವರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಹಾಯಕತೆ ತೋರು ತ್ತಿದ್ದಾರೆ. ಹಲವು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ಎಐವೈಎಫ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಫೀಕ್ ನವಲಗುಂದ, ದಲಿತ ರೈಟ್ಸ್ ಕಮಿಟಿಯ ಅಧ್ಯಕ್ಷ ರಮೇಶ್ ಮಾಯಮುಡಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಮಣಿ, ಮಹಿಳಾ ಸಂಘಟನೆ ಅಧ್ಯಕ್ಷೆ ಪುಷ್ಪಾ ಮಣಿ, ಸಿಪಿಐ ಗ್ರಾಮ ಸಮಿತಿ ಕಾರ್ಯದರ್ಶಿ ಎಂ.ಎ. ಕೃಷ್ಣ, ಪ್ರಮುಖರಾದ ಮಣಿ, ವಸಂತ, ಕುಮಾರ್, ಸೀತಾರಾಂ ಮತ್ತಿತರರು ಉಪಸ್ಥಿತರಿದ್ದರು.