ಮಡಿಕೇರಿ, ಡಿ. ೨೭: ಕುಶಾಲನಗರ ಸನಿಹದ ಬೈಚನಹಳ್ಳಿ ಗ್ರಾಮ ಸುತ್ತಮುತ್ತ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳರು ಸುಳಿದಾಡುತ್ತ ಮನೆಗಳ ಸುತ್ತಮುತ್ತ ಇರುವ ವಸ್ತುಗಳನ್ನು ಕಳವು ಮಾಡುತ್ತಿದ್ದಾರೆ. ಅಲ್ಲದೆ, ಮನೆಗಳಿಗೂ ಕನ್ನ ಹಾಕಲು ಪ್ರಯತ್ನ ನಡೆಸಿರುವುದಾಗಿ ತಿಳಿದು ಬಂದಿದೆ. ಈ ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ಬಿಗಿಗೊಳಿಸುವ ಮೂಲಕ ಜನರಲ್ಲಿ ಉಂಟಾಗಿರುವ ಭಯದ ವಾತಾವರಣವನ್ನು ಹೋಗಲಾಡಿಸುವದಲ್ಲದೇ ಹೆಚ್ಚಿನ ಅಪಾಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.