ಶನಿವಾರಸಂತೆ, ಡಿ. ೨೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಆಟೋ ಚಾಲಕ ಸಂಘದವರಿಗೆ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ಸಾರ್ವಜನಿಕರು ಕಳ್ಳರ ಬಗ್ಗೆ ಸದಾ ಎಚ್ಚರ ವಹಿಸಬೇಕು. ದ್ವಿಚಕ್ರ ವಾಹನ ಚಾಲಕರು ಐಎಸ್ಐ ಮಾರ್ಕ್ಸ್ನ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು, ಸೈಬರ್ ಅಪರಾಧ ಪ್ರಕರಣದ ಬಗ್ಗೆಯೂ ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.
ಸಿಬ್ಬಂದಿ ಪ್ರದೀಪ್ಕುಮಾರ್, ಲೋಕೇಶ್, ವೆಂಕಟೇಶ್ ಹಾಗೂ ಆಟೋಚಾಲಕರ ಸಂಘದವರು ಇದ್ದರು.
ಸುಂಟಿಕೊಪ್ಪ: ಮಕ್ಕಳು ಮೊಬೈಲ್ ಬಳಸುವುದರ ಮೇಲೆ ಪೋಷಕರು ನಿಗಾವಹಿಸಬೇಕೆಂದು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹೇಳಿದರು.
ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪೊಲೀಸ್ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ವಾಹನ ತೆಗೆದುಕೊಡುವುದು, ಹೆಲ್ಮೆಟ್ ಹಾಕದೆ ಮೋಟಾರ್ ಬೈಕ್ ಚಲಿಸುವುದು ಅಪರಾಧವಾಗುತ್ತದೆ. ಮಕ್ಕಳ ಚಲನವಲನಗಳ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಹೇಳಿದರು. ಸೋಮವಾರಪೇಟೆ ಠಾಣೆ ಉಪನಿರೀಕ್ಷಕ ಶ್ರೀಧರ್ ಹಾಗೂ ಮಾದಾಪುರ ಉಪಠಾಣೆ ಎಎಸ್ಐ ಪೊನ್ನಪ್ಪ ಇದ್ದರು.