ಬೆಂಗಳೂರು, ಡಿ. ೨೬: ಕೊರೊನಾ ಪರಿಸ್ಥಿತಿಯಿಂದ ಕರ್ನಾಟಕ ಚೇತರಿಕೆಯಾಗುವ ಹೊತ್ತಿನಲ್ಲಿ ಓಮಿಕ್ರಾನ್ ಭೀತಿ ರಾಜ್ಯಕ್ಕೆ ತಟ್ಟಿದ್ದು, ರಾಜ್ಯ ಸರಕಾರ ಇದೀಗ ‘ನೈಟ್ ಕರ್ಫ್ಯೂ’ ಮೊರೆ ಹೋಗಿದೆ. ನಾಳೆಯಿಂದ (ತಾ.೨೮) ಜನವರಿ ೭ ರ ತನಕ ರಾತ್ರಿ ೧೦ ರಿಂದ ಬೆಳಿಗ್ಗೆ ೫ ರ ತನಕ ಕಟ್ಟುನಿಟ್ಟಿನ ಕ್ರಮ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ.

ಕೊರೊನಾ ರೂಪಾಂತರಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ರಾಜ್ಯಾದ್ಯಂತ ೧೦ ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿ ಘೋಷಿಸಿದ್ದಾರೆ. ಹೊಟೇಲ್‌ಗಳಲ್ಲಿ ಇರುವ ಆಸನಗಳಲ್ಲಿ ಶೇ. ೫೦ ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ, ಸಭೆ ಸಮಾರಂಭ, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ. ೫೦ ರಷ್ಟು ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ರಾತ್ರಿ ೧೦ ಗಂಟೆ ನಂತರ ಸಿನಿಮಾ ಥಿಯೇಟರ್ ಬಂದ್ ಆಗಲಿದೆ. ಓಮಿಕ್ರಾನ್ ಸೋಂಕನ್ನು ಶೀಘ್ರವೇ ಪತ್ತೆ ಹಚ್ಚಲು ಹೊಸ ಯಂತ್ರದ ಅವಶ್ಯಕತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಆ ಉಪಕರಣ ಖರೀದಿಸಲು ಸರ್ಕಾರ ಚಿಂತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ

ಬಿಗಿಕ್ರಮಗಳೇನು..?

ಓಮಿಕ್ರಾನ್ ತಡೆಗೆ ರಾಜ್ಯ ಸರಕಾರ ಕೆಲವೊಂದು ಬಿಗಿನಿಯಮ ರೂಪಿಸಿದೆ. ಈ ಬಾರಿ ಹೊಸ ವರ್ಷದ ಸಂಭ್ರಮ ಮನೆಯಲ್ಲೇ ಆಚರಣೆ ಮಾಡಬೇಕಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಮಾರಂಭಕ್ಕೆ ನಿಷೇಧ ಹೇರಲಾಗಿದೆ. ತಾ. ೨೮ ರಿಂದ ಒಟ್ಟು ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯ ಲ್ಲಿರಲಿದ್ದು,

(ಮೊದಲ ಪುಟದಿಂದ) ನಾಳೆ ರಾತ್ರಿ ೧೦ ರಿಂದ ಜ. ೭ ರ ಬೆಳಿಗ್ಗೆ ೫ ಗಂಟೆಯ ತನಕ ಬಿಗಿಕ್ರಮ ಇರಲಿದೆ. ಈ ಅವಧಿಯಲ್ಲಿ ಅನಗತ್ಯವಾಗಿ ಯಾರೂ ಮನೆಯಿಂದ ಹೊರ ಬರುವಂತಿಲ್ಲ, ತಾ. ೩೦ ರಿಂದ ಜನವರಿ ೨ ರವರೆಗೆ ಹೋಟೆಲ್, ಕ್ಲಬ್, ಬಾರ್, ಪಬ್‌ಗಳಲ್ಲಿ ಹಗಲಲ್ಲಿ ಐವತ್ತು ಶೇ ಗ್ರಾಹಕರಿಗಷ್ಟೇ ಅವಕಾಶ ನೀಡಲಾಗಿದೆ. ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹಾಗು ೨ ಡೋಸ್ ಲಸಿಕೆ ಪಡೆದಿರಬೇಕು. ಡಿಸೆಂಬರ್ ೨೮ ರಿಂದ ಎಲ್ಲಾ ರೀತಿಯ ಸಭೆ, ಸಮಾರಂಭ, ಸಮಾವೇಶ ಸೇರಿದಂತೆ ಮದುವೆ ಕಾರ್ಯಕ್ರಮಗಳಿಗೆ ಗರಿಷ್ಟ ೩೦೦ ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಸರಕಾರದ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಆತಂಕ ಮೂಡಿಸಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ತಡೆಗೆ ಕೇರಳ ಹಾಗೂ ಮಹಾರಾಷ್ಟç ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆದೇಶದಲ್ಲಿ ಸರಕಾರ ತಿಳಿಸಿದೆ. ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಸಿದೆ.