ಕೋವಿಡ್ ಲಸಿಕೆ: ೧೫-೧೮ ವರ್ಷ ಮಕ್ಕಳ ನೋಂದಣಿ ಜ.೧ರಿಂದ ಆರಂಭ

ನವದೆಹಲಿ, ಡಿ. ೨೭: ೧೫ ರಿಂದ ೧೮ ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಜನವರಿ ೧ ರಿಂದ ಕೋವಿನ್ ಅಪ್ಲಿಕೇಶನ್‌ನಲ್ಲಿ ಕೋವಿಡ್-೧೯ ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಈ ಕುರಿತು ಕೋವಿನ್ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ಅವರು ಮಾಹಿತಿ ನೀಡಿದ್ದು, ೧೫-೧೮ ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜನವರಿ ೧ ರಿಂದ ಆರಂಭವಾಗಲಿದೆ. ಸಾಕಷ್ಟು ಮಕ್ಕಳು ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ಚೀಟಿಗಳನ್ನು ಹೊಂದಿಲ್ಲದ ಕಾರಣ, ನೋಂದಣಿಗಾಗಿ ಹೆಚ್ಚುವರಿಯಾಗಿ (೧೦ನೇ) ವಿದ್ಯಾರ್ಥಿ ಗುರುತಿನ ಚೀಟಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಜನವರಿ ೩ ರಿಂದ ೧೫ ರಿಂದ ೧೮ ವರ್ಷ ವಯಸ್ಸಿನವರು ತಮ್ಮ ಮೊದಲ ಸುತ್ತಿನ ಕೋವಿಡ್ ಲಸಿಕೆಗಳನ್ನು ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಓಮಿಕ್ರಾನ್‌ನ ಆತಂಕದ ಮಧ್ಯೆಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬದಲಾದ ನಿಯಮಗಳೊಂದಿಗೆ ೨೦೦೭ ರ ಮೊದಲು ಜನಿಸಿದ ಎಲ್ಲರಿಗೂ ಜನವರಿ ೧ ರಿಂದ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ೧೫ ರಿಂದ ೧೮ ವರ್ಷದ ಮಕ್ಕಳಿಗೆ ದೇಶದಲ್ಲಿ ಲಸಿಕೆ ನೀಡುತ್ತೇವೆ. ೩ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಜನವರಿ ೧೦ ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದ್ದರು. ಅಲ್ಲದೆ, ಓಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.

ಸಾರಿಗೆ, ಎಸ್ಕಾಂ ಸಂಸ್ಥೆಗಳ ಪುನಶ್ಚೇತನಕ್ಕೆ ಸಮಿತಿ ರಚನೆ: ಸಿಎಂ ಬೊಮ್ಮಾಯಿ

ಬೆಂಗಳೂರು, ಡಿ. ೨೭: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸ ವಿನ್ಯಾಸ, ಉತ್ತಮ ಸೇವೆ ಹಾಗೂ ಸಂಪನ್ಮೂಲ ಸೃಜನೆಯ ಮೂಲಕ ಭಾರತದಲ್ಲಿಯೇ ನಂ. ೧ ಸಾರಿಗೆ ಸಂಸ್ಥೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಆಯೋಜಿಸಿರುವ ವಿದ್ಯುತ್ ಚಾಲಿತ ಬಸ್ ಮತ್ತು ಬಿಎಸ್-೬ ಡೀಸೆಲ್ ಬಸ್‌ಗಳಿಗೆ ವಿಧಾನಸೌಧದ ಪೂರ್ವದ್ವಾರದ ಬಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ದಿಸೆಯಲ್ಲಿ ಬಿಎಂಟಿಸಿಯ ಪ್ರಯತ್ನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಸಬ್ಸಿಡಿ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಕಷ್ಟಸಾಧ್ಯ. ಅದಕ್ಕಾಗಿ ರಾಜ್ಯದ ಎಲ್ಲ ಸಾರಿಗೆ ನಿಗಮಗಳನ್ನು ಪುನಶ್ಚೇತನಗೊಳಿಸಲು ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಶೀಘ್ರ ಪುನರಾರಂಭ

ಬೆAಗಳೂರು, ಡಿ. ೨೭: ಹಿರಿಯ ನಾಗರಿಕರ ಡೇ ಕೇರ್ ಕೇಂದ್ರಗಳು ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದವು. ಇದೀಗ ಅವುಗಳನ್ನು ಮತ್ತೆ ತೆರೆಯುವ ಕುರಿತು ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಕಾರ್ಯಪ್ರವೃತ್ತವಾಗಿರುವ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅನೇಕ ಜಿಲ್ಲೆಗಳಲ್ಲಿ ವಯೋವೃದ್ಧರ ಡೇ ಕೇರ್ ಸೆಂಟರುಗಳನ್ನು ಪುನರಾರಂಭಿಸುವAತೆ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ನಾಗರಿಕರ ಡೇ ಕೇರ್ ಸೆಂಟರ್‌ಗಳು ಮುಚ್ಚಲ್ಪಟ್ಟಿದ್ದರಿಂದ ಅನೇಕ ಹಿರಿಯರು ಅವರವರ ಮನೆಗಳಿಗೆ ತೆರಳಿದ್ದರು. ಕೆಲ ಮನೆಗಳಲ್ಲಿ ಮನೆಯವರು ಅವರನ್ನು ಚೆನ್ನಾಗಿ ನೋಡಿಕೊಂಡರೆ, ಕೆಲ ಮನೆಗಳಲ್ಲಿ ಹಿರಿಯರಿಗೆ ಬೇಕಾದ ಆಹಾರ ಮತ್ತು ನಿರ್ವಹಣಾ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೈಟ್ ಕರ್ಫ್ಯೂ: ಹೊಟೇಲ್ ಉದ್ಯಮಿಗಳ ವಿರೋಧ

ಬೆಂಗಳೂರು, ಡಿ. ೨೭: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ತಾ. ೨೮ ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸರ್ಕಾರದ ನಿರ್ಬಂಧಕ್ಕೆ ಹೊಟೇಲ್ ಉದ್ಯಮಿಗಳು, ಬಾರ್, ಪಬ್ ಉದ್ಯಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೈಟ್ ಕರ್ಫ್ಯೂ ಜಾರಿಗೊಳಿಸಿದ್ದಲ್ಲಿ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ. ಈಗಾಗಲೇ ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿದಂತೆ ಮತ್ತಿತರ ನಿರ್ಬಂಧಗಳು ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಹೊಟೇಲ್ ಉದ್ಯಮ, ಆಟೋ, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ನಲುಗಿದ್ದಾರೆ. ಇದೇ ಕಾರಣಕ್ಕೆ ನೈಟ್ ಕರ್ಪ್ಯೂಗೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಹೊಟೇಲ್ ಉದ್ಯಮಿಗಳು, ಬಾರ್, ಪಬ್ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.