ಗಾಳಿಬೀಡು, ಡಿ.೨೬: ಸ್ವಾತಂತ್ರ‍್ಯೋತ್ಸವದ ಅಮೃತಮಹೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಲಶಕ್ತಿ ಮಂತ್ರಾಲಯ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ, ಅರಣ್ಯ ಮತ್ತು ಪರಿಸರ ಸಚಿವಾಲಯ ಸಂಯುಕ್ತವಾಗಿ ದೇಶದಾದ್ಯಂತ ಡಿಸೆಂಬರ್ ೧೫ ರಿಂದ ಡಿಸೆಂಬರ್ ೨೫ ರ ನಡುವೆ ನದಿಹಬ್ಬಗಳನ್ನು ಆಚÀರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಸಮೀಪದ ಗಾಳಿಬೀಡಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ತಾ. ೨೦ ರಂದು ಕಾವೇರಿ ನದೀತಟ ಬೇತ್ರಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ನದಿಹಬ್ಬವನ್ನು ಆಚರಿಸಿದರು. ವಿದ್ಯಾಲಯ ಉಪಪ್ರಾಚಾರ್ಯರಾದ ಸುಧಾಮಣಿ ಪಂಕಜಾಕ್ಷನ್ ಅವರ ಮಾರ್ಗದರ್ಶನದಲ್ಲಿ ನಡೆದ ನದಿಹಬ್ಬದಲ್ಲಿ ೩೫ ವಿದ್ಯಾರ್ಥಿಗಳು, ೫ ಶಿಕ್ಷಕರೂ ಪಾಲ್ಗೊಂಡಿದ್ದರು. ನದಿತಟದ ಸುಂದರ ಪರಿಸರದಲ್ಲಿ ಜಲಮೂಲ ಮತ್ತು ನದಿಗಳ ಸ್ವಚ್ಛತೆ ಮತ್ತು ಸಂರಕ್ಷಣೆಯ ಕುರಿತಾಗಿ ವಿದ್ಯಾರ್ಥಿವೃಂದದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಲಜಾಗೃತಿ ಸಾರುವ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದ ವಿದ್ಯಾರ್ಥಿ ಹಾಗೂ ಸಿಬ್ಬಂದಿವರ್ಗದವರು ಒಟ್ಟಿಗೆ ಕೂಡಿ ನದಿತಟವನ್ನು ಸ್ವಚ್ಚಗೊಳಿಸಿದರು. ನಂತರ ಎಳೆಬಿಸಿಲಲ್ಲಿ ಯೋಗಾಭ್ಯಾಸ ನಡೆಯಿತು. ಕಾವೇರಿ ನದಿರಕ್ಷಣೆಯ ಕುರಿತು ಶಿಕ್ಷಕರು ಉಪನ್ಯಾಸ ನೀಡಿದರು. ಒಟ್ಟಿನಲ್ಲಿ ನದಿತಟದ ಸುಂದರ ಪರಿಸರದಲ್ಲಿ ನದಿ ಮತ್ತು ಜಲಮೂಲಗಳ ಸಂರಕ್ಷಣೆ, ಸದ್ಬಳಕೆಗಳ ಕುರಿತು ವಿದ್ಯಾರ್ಥಿ ಸಮೂಹದಲ್ಲಿ ಜಾಗೃತಿ ಮೂಡಿಸುವ ಕಿರುಪ್ರಯತ್ನ ಯಶಸ್ವಿಯಾಯಿತು.