ಗೋಣಿಕೊಪ್ಪಲು, ಡಿ. ೨೬: ಮುಂದಿನ ದಿನಗಳು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸವಾಲಿನ ದಿನಗಳಾಗಲಿದ್ದು ಈ ಸವಾಲನ್ನು ಎದುರಿಸಿ ಪಕ್ಷದ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿAದಲೇ ಕಾರ್ಯಪ್ರವೃತ್ತರಾಗುವಂತೆ ಕೊಡಗು ಜಿಲ್ಲಾ ನೂತನ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾಕುಶಾಲಪ್ಪ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕರೆ ನೀಡಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮುಂದಿನ ದಿನದಲ್ಲಿ ಜಿ.ಪಂ. ತಾ.ಪಂ. ಚುನಾವಣೆಗಳು ಎದುರಾಗಲಿದೆ. ತದನಂತರ ವಿಧಾನಸಭೆಗೆ ಚುನಾವಣೆ ಬರಲಿದೆ ಹೀಗಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಯ ಬಳಿ ಕೊಂಡೊಯ್ಯಬೇಕಾದ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದಾಗಿದೆ. ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವಾಗಿ ಮಾಡಲು ಎಲ್ಲರೂ ಪಣ ತೊಡುವಂತೆ ತಿಳಿಸಿದರು. ಶಾಸಕರು ಹಾಗೂ ಪರಿಷತ್ ಸದಸ್ಯರು ಸರ್ಕಾರದಿಂದ ವಿಶೇಷ ಅನುದಾನಗಳನ್ನು ತರುವ ಜವಾಬ್ದಾರಿ ವಹಿಸುತ್ತಾರೆ. ಕಾರ್ಯಕರ್ತರು ಅನುದಾನವನ್ನು ಬಳಕೆ ಮಾಡಿಕೊಂಡು ಜನರಿಗೆ ಉತ್ತಮ ಕೆಲಸ ಮಾಡುವಂತೆ ತಿಳಿಸಿದರು. ದೇಶದ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮ ದಿನದಂದು ನಾವೆಲ್ಲರೂ ಇವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವಂತೆ ತಿಳಿಸಿದರು. ಕೊಡಗಿನ ಸಾಂಸ್ಕೃತಿಕವಾದ ಒಡಿಕತ್ತಿ ನೀಡಿ ನೂತನ ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವೀರಾಜಪೇಟೆ ಮಂಡಲ ಅಧ್ಯಕ್ಷೆ ನೆಲ್ಲಿರ ಚಲನ್ ಕುಮಾರ್, ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮ ದಿನವನ್ನು ಆಚರಿಸಲು ಪಕ್ಷದ ಸೂಚನೆ ಇದೆ. ಇದರಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇವರ ಆದರ್ಶ ಗುಣಗಳನ್ನು ಪಕ್ಷದ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು. ಬಿಜೆಪಿ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿ ದೇಶದ ಪ್ರಧಾನಿಗಳಾಗಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಇವರು ಮಾಡಿದ ಪ್ರಯತ್ನ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಜಿಲ್ಲೆಯ ಅಭಿವೃದ್ದಿಗೆ ಅನುದಾನವನ್ನು ತರಲಾಗಿದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದಲ್ಲಿ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೆಯು ವ್ಯಾಪಾರೀಕರಣವಾಗುತ್ತಿರುವುದು ಆತಂಕ ಉಂಟುಮಾಡುತ್ತಿದೆ. ಮುಂದಿನ ದಿನಗಳು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸವಾಲಿನ ದಿನಗಳಾಗಿವೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ ಅತಿಯಾದ ಆತ್ಮವಿಶ್ವಾಸದಿಂದ ಚುನಾವಣೆಯನ್ನು ಎದುರಿಸಬಾರದು. ಈ ಆತ್ಮವಿಶ್ವಾಸ ನಮಗೆ ಹಿನ್ನಡೆಯಾಗುತ್ತದೆ. ಇದರ ಫಲವನ್ನು ನಾವು ಈಗಾಗಲೇ ಕಂಡಿದ್ದೇವೆ. ಮುಂದಿನ ದಿನದಲ್ಲಿ ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ವೇದಿಕೆ ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯ ಶಿಸ್ತು ಸಮಿತಿಯ ಸದಸ್ಯರಾದ ರೀನಾ ಪ್ರಕಾಶ್ ಮಾತನಾಡಿ ಪ್ರತಿ ಚುನಾವಣೆಯಲ್ಲಿಯೂ ಕಾರ್ಯಕರ್ತರು ತಮ್ಮೆಲ್ಲ ಶ್ರಮವನ್ನು ಧಾರೆ ಎರೆಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಇದೇ ರೀತಿಯ ಕೆಲಸ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ಪಕ್ಷದ ಮುಖಂಡರಾದ ಗುಮ್ಮಟ್ಟೀರ ಕಿಲನ್ ಗಣಪತಿ, ಚೆಪ್ಪುಡೀರ ಮಾಚು, ಸಣ್ಣುವಂಡ ಸುರೇಶ್, ಕಾಡ್ಯಮಾಡ ಭರತ್, ಆದೇಂಗಡ ವಿನು, ಮಂಡೇಪAಡ ಸುವಿನ್ ಗಣಪತಿ, ಸಿ.ಕೆ. ಬೋಪಣ್ಣ, ಚೋಡುಮಾಡ ಶರೀನ್ ಸುಬ್ಬಯ್ಯ, ರಾಣಿ ನಾರಾಯಣ, ಕವನ್ ಕಾರ್ಯಪ್ಪ, ಅಚ್ಚಪಂಡ ಮಹೇಶ್, ಕುಪ್ಪಂಡ ಗಿರಿ ಪೂವಣ್ಣ, ಕೆ. ರಾಜೇಶ್, ಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಳ್ಳಿಮಾಡ ಶಿಲ್ಪ ಪ್ರಾರ್ಥಿಸಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

-ಹೆಚ್.ಕೆ. ಜಗದೀಶ್