ವೀರಾಜಪೇಟೆ, ಡಿ. ೨೪: ಹಿಂದು ಅಗ್ನಿದಳದ ೧೦ನೇ ವಾರ್ಷಿಕೋತ್ಸವ ಪ್ರಯುಕ್ತ ಜನವರಿ ೧೫ ಮತ್ತು ೧೬ ರಂದು ಹಿಂದೂ ಬಾಂಧವರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟವನ್ನು ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾನೂನು ಸಲಹೆಗಾರ ವಕೀಲ ಟಿ.ಪಿ. ಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯವರೆಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಪ್ರಥಮ ಬಾರಿಗೆ ಕಾಲ್ಚೆಂಡು ಪಂದ್ಯಾಟವನ್ನು ಹೊನಲು ಬೆಳಕಿನಲ್ಲಿ ನಡೆಸಲಾಗುತ್ತಿದೆ. ಹಿಂದಿನ ಪಂದ್ಯಾಟದಲ್ಲಿ ಉಳಿದ ಹಣದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯ ಮಾಡಲಾಗಿದೆ. ಕಷ್ಟದಲ್ಲಿದ್ದ ಅನೇಕ ಹಿಂದೂ ಬಾಂಧವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗಿದೆ. ಈ ಬಾರಿಯು ಕೂಡ ಉಳಿದ ಹಣವನ್ನು ಹಿಂದೂ ಭಾಂದವರಿಗಾಗಿ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಸಹ ಸಂಚಾಲಕ ದಿನೇಶ್ ನಾಯರ್ ಮಾತನಾಡಿ, ಕಾಲ್ಚೆಂಡು ಪಂದ್ಯಾಟ ವನ್ನು ಇತ್ತಿಚೇಗೆ ನಿಧನ ಹೊಂದಿದ ಸಂಘದ ಸದಸ್ಯ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ಬಿ. ಹರ್ಷವಧನ್ ಅವರ ಜ್ಞಾಪಕಾರ್ಥ ನಡೆಸಲಾಗುವುದು. ಆಟಗಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಇತರೆ ಯಾವುದಾರೂ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಪಂದ್ಯಾವಳಿ ಕೇವಲ ಹಿಂದೂ ಬಾಂಧವರಿಗೆ ಮಾತ್ರ ಸೀಮಿತವಾಗಿದೆ. ಪಂದ್ಯಾಟದ ನೋಂದಣಿಗಾಗಿ ೮೭೬೨೨೭೯೩೯೭, ೯೪೮೩೦೮೬೧೧೩೪ ಸಂಖ್ಯೆ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಚಾಲಕ ಪ್ರಸನ್ನ, ಸಹ ಸಂಚಾಲರಾದ ಮನೋಜ್ ಕುಮಾರ್, ಸುನಿಲ್‌ಗೌಡ ಉಪಸ್ಥಿತರಿದ್ದರು.