ಮಡಿಕೇರಿ, ಡಿ. ೨೪: ಹೈಸೊಡ್ಲೂರು, ಟಿ. ಶೆಟ್ಟಿಗೇರಿ ವೆಸ್ಟ್ನೆಮ್ಮಲೆ ಮೊದಲಾದ ಪ್ರದೇಶಗಳಲ್ಲಿ ಟಾಟಾ ಕಂಪೆನಿ ಅಭಿವೃದ್ಧಿಪಡಿಸಿದ್ದ ಗ್ಲೆನ್‌ಲೋರ್‌ನಾ ಟೀ ತೋಟದ ಜಾಗವನ್ನು ಮರುಸ್ವಾಧೀನಗೊಳಿಸಲು ಇತ್ತೀಚೆಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಅವರು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದರು. ೯೯ ವರ್ಷದ ಗೇಣಿ ಅವಧಿ ಮುಗಿದಿದ್ದರಿಂದ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿತ್ತು.

ಇದೀಗ ಟಾಟಾ ಕಾಫಿ ಲಿಮಿಟೆಡ್ ಪ್ರಮುಖರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ಕಂದಾಯ ಅಧಿಕಾರಿಗಳು ಹೊರಡಿಸಿರುವ ಈ ಆದೇಶವನ್ನು ರದ್ದುಗೊಳಿಸುವಂತೆ ವಕೀಲರ ಮೂಲಕ ಕೋರಿದ್ದಾರೆ. ಟಾಟಾ ಸಂಸ್ಥೆಯ ಅಧೀನದಲ್ಲಿರುವ ಈ ಸ್ವತ್ತು ವಿವಾದವು ಇನ್ನೂ ಇತ್ಯರ್ಥಗೊಳ್ಳುವ ಮೊದಲೇ ಕಂದಾಯ ಅಧಿಕಾರಿಗಳು ತಾವೇ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಪ್ರತಿವಾದಿಗಳನ್ನಾಗಿ ರಾಜ್ಯ ಸರಕಾರ, ರಾಜ್ಯ ಸರಕಾರದ ಕಂದಾಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ವೀರಾಜಪೇಟೆ ತಾಲೂಕು ತಹಶೀಲ್ದಾರ್, ಹುದಿಕೇರಿ ಹೋಬಳಿಯ ಕಂದಾಯ ಪರಿವೀಕ್ಷಕರು ಹಾಗೂ ಶ್ರೀಮಂಗಳ ಹೋಬಳಿಯ ಕಂದಾಯ ಪರಿವೀಕ್ಷ ಕರುಗಳನ್ನು ಪರಿಗಣಿಸಿ ಉಲ್ಲೇಖಿಸ ಲಾಗಿದೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಕುರಿತು ಆಸ್ತಿಯ ಈಗಿನ ಸ್ವಾಧೀನದಾರರು ಸಲ್ಲಿಸಿರುವ ಈ ಮನವಿಯನ್ವಯ ಮುಂದಿನ ವಿಚಾರಣೆ ಕೈಗೊಳ್ಳುವರೆಗೆ ಯಥಾಸ್ಥಿತಿ ಮುಂದುವರಿಸುವAತೆ ಆದೇಶಿಸಿದ್ದಾರೆ. ಇದರಿಂದಾಗಿ ಕಂದಾಯ ಇಲಾಖೆಯ ಹಾಗೂ ಅರಣ್ಯ ಇಲಾಖೆಯ ಮರು ಭೂಸ್ವಾಧೀನ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.