ಮಡಿಕೇರಿ, ಡಿ. ೨೩: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ‘ಮೈಂಡ್ ಆ್ಯಂಡ್ ಮ್ಯಾಟರ್’ ಸಂಸ್ಥೆ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ಎಂ.ಎ. ಅಚ್ಚಯ್ಯ, ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವವರು ಲಕ್ಷಾಂತರ ಮಂದಿ ಇದ್ದಾರೆ. ದೈಹಿಕ ಆರೋಗ್ಯ ಸಮಸ್ಯೆಯಂತೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣುವುದಿಲ್ಲ. ಅದು ಕಾಡುತ್ತದೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಬೇಕು. ಈ ಸಮಸ್ಯೆ ಬಗೆಹರಿಯಬೇಕಾದರೆ ಒತ್ತಡ ದೂರವಾಗಬೇಕು.
ಈ ನಿಟ್ಟಿನಲ್ಲಿ ಮಾನಸಿಕ ಒತ್ತಡದ ವಿರುದ್ಧದ ಹೋರಾಟದಲ್ಲಿರುವವರು ಒಬ್ಬಂಟಿಗರಲ್ಲ ಎಂದು ಸಾಂಕೇತಿಕವಾಗಿ ಬಿಂಬಿಸಲು ತಾ. ೨೩ ರಿಂದ ೨೮ ರ ತನಕ ಅಭಿಯಾನ ಕೈಗೊಳ್ಳಲಾಗಿದ್ದು, ಮಡಿಕೇರಿ ನಗರದ ದಿ ವೀಲ್‌ಕೆಫೆಯಲ್ಲಿ ಬೆಳಿಗ್ಗೆ ೧೧.೩೦ ರಿಂದ ಸಂಜೆ ೫.೩೦ ರ ತನಕ “ಪೆಯಿಂಟ್ ದಿ ವಾಲ್’ ಎಂಬ ವಿನೂತನ ಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಇಲ್ಲಿ ಯಾರು ಬೇಕಾದರೂ ಬಂದು ತಮಗಿಷ್ಟ ಬಂದ ಚಿತ್ರವನ್ನು ಬಿಡಿಸಬಹುದು ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಮತ್ತೋರ್ವ ಟ್ರಸ್ಟಿ ಎಂ.ಎ. ದೀಪಿಕಾ ಹಾಜರಿದ್ದರು.