ಕೊಡ್ಲಿಪೇಟೆ,ಡಿ.೨೪: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಣಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ, ಗ್ರಾ.ಪಂ. ಅಧ್ಯಕ್ಷರೂ ಸೇರಿದಂತೆ ಒಟ್ಟು ೧೧ ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ಲೆಕ್ಕಸಹಾಯಕಿಯಾಗಿರುವ ಹರಿಣಿ ಅವರು ನಿನ್ನೆ ಮಧ್ಯಾಹ್ನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿಷ ಸೇವನೆ ಮಾಡಿದ್ದು, ಇದಕ್ಕೂ ಮುನ್ನ ತಮ್ಮದೇ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿ ಹಲವರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದರು.
ಹರಿಣಿ ಅವರು ವಿಷ ಸೇವಿಸಿದ ನಂತರ ಕಂಪ್ಯೂಟರ್ ಆಪರೇಟರ್ ಲತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಅವರು ತಮ್ಮ ತಂದೆ ಸುರೇಶ್ ಅವರೊಂದಿಗೆ ಕಚೇರಿಗೆ ಆಗಮಿಸಿ ಕೊಡ್ಲಿಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಿಸಿದ್ದರು.
ಇಂದು ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಯ ಮುಖ್ಯಪೇದೆ ಡಿಂಪಲ್ ಅವರು ಹಾಸನದ ಆಸ್ಪತ್ರೆಗೆ ತೆರಳಿ ರೋಗಿಯನ್ನು ವಿಚಾರಿಸಿದ್ದು, ಈ ಸಂದರ್ಭ ಹರಿಣಿ ಅವರ ಸಹೋದರ ಪುನೀತ್ ನೀಡಿದ ದೂರಿನನ್ವಯ ಒಟ್ಟು ೧೧ ಮಂದಿಯ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ ಹಂಗಾಮಿ ವಾಟರ್‌ಮೆನ್‌ಗಳಾಗಿರುವ ದೊಡ್ಡಕೊಡ್ಲಿಯ ವೀರಭದ್ರ, ವಸಂತ್, ಕೆಳಕೊಡ್ಲಿ ಗ್ರಾಮದ ತ್ಯಾಗರಾಜ್, ಡಿಎಸ್‌ಎಸ್ ಮುಖಂಡರಾದ ದೊಡ್ಡಕೊಡ್ಲಿ ವಸಂತ್, ಹೇಮಂತ್, ಜಗದೀಶ್, ಗ್ರಾ.ಪಂ. ಸದಸ್ಯ ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಕೆರಗನಹಳ್ಳಿ ರೇವುಗೌಡ (ರೇವಣ್ಣ) ಸೇರಿದಂತೆ ವಾಟರ್‌ಮೆನ್ ವೀರಭದ್ರ ಅವರ ಈರ್ವರು ಪುತ್ರರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ನಿನ್ನೆ ದಿನ ವಿಷ ಸೇವಿಸುವುದಕ್ಕೂ ಮುನ್ನ ಹಲವರ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿದ್ದ ಹರಿಣಿ ಅವರು, ‘ಕಚೇರಿಯಲ್ಲಿ ಮಾನಸಿಕ ಕಿರಿಕಿರಿಯಾಗುತ್ತಿದೆ. ನನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಎದುರು ನಿಂದಿಸಿ, ಅವಮಾನ ಮಾಡಿದ್ದಾರೆ. ಆತ್ಮಗೌರವಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ಹೊಡೆಯಲು ಬಂದಿದ್ದಾರೆ. ಇವರಿಂದಾಗಿ ಕಚೇರಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಗೂಂಡಾ ರೀತಿಯ ವರ್ತನೆಯಿಂದ ನೊಂದಿದ್ದೇನೆ’ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಅವರ ಸಹೋದರ ಪುನೀತ್, ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಕಲಂ ೩೪೧, ೫೦೪, ೫೦೬, ಜೊತೆಗೆ ೩೪ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಿಣಿ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.