ಸೋಮವಾರಪೇಟೆ, ಡಿ. ೨೦: ರಾಜ್ಯದ ಸಿದ್ಧ ಉಡುಪುಗಳ ತಯಾರಿಕರಿಂದ ಶೆ. ೧ರಷ್ಟು ತೆರಿಗೆಯನ್ನು ವಸೂಲಿ ಮಾಡುವ ಮೂಲಕ ಟೈಲರ್ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಸರ್ಕಾರದಿಂದ ಸವಲತ್ತು ಪಡೆಯಲು ಸಾಧ್ಯ ಎಂದು ಕರ್ನಾಟಕ ಸ್ಟೇಟ್ ಟೈರ್ಸ್ ಅಸೋಸಿಯೇಶನ್ನ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಬಿ.ಎನ್. ಮಂಜುನಾಥ್ ಅಭಿಪ್ರಾಯಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈರ್ಸ್ ಅಸೋಸಿಯೇಶನ್ನ ಸೋಮವಾರಪೇಟೆ ಕ್ಷೇತ್ರ ಸಮಿತಿ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟೈಲರ್ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯ ಸೇರಿದಂತೆ ಇನ್ನಿತರ ಕಷ್ಟದ ಸಂದರ್ಭದಲ್ಲಿ ನೆರವು ಪಡೆಯಬಹುದು. ಈ ಬಗ್ಗೆ ಜಿಲ್ಲಾ ಸಮಿತಿಯಿಂದ ನಿರ್ಣಯ ಕೈಗೊಂಡು ರಾಜ್ಯ ಸಮಿತಿಗೆ ಕಳುಹಿಸಲು ಕ್ರಮ ವಹಿಸಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ನಿಂದಾಗಿ ಸರಿಯಾಗಿ ಕೆಲಸವೂ ಇಲ್ಲದೆ, ಅಂಗಡಿ ಬಾಗಿಲನ್ನು ತೆರೆದು ಕೆಲಸ ಮಾಡಲು ಸಾಧ್ಯವಾಗದೆ ಸಾಕಷ್ಟು ಟೈಲರ್ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ. ರಾಜ್ಯ ಸಮಿತಿಯ ಸಹಕಾರದಿಂದ ಹೆಚ್ಚಿನ ಟೈಲರ್ ಕುಟುಂಬಗಳಿಗೆ ರೂ. ೨ ಸಾವಿರ ಪರಿಹಾರ ಮತ್ತು ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದ್ದರಿಂದ ಅಲ್ಪಮಟ್ಟಿಗೆ ಸುಧಾರಿಸಿಕೊಳ್ಳುವಂತಾಗಿದೆ ಎಂದು ಅಭಿಪ್ರಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಹೊಸೊಕ್ಲು ಲಿಂಗಪ್ಪ ಮಾತನಾಡಿ, ಸರ್ಕಾರದ ಯೋಜನೆಗಳು ಎಲ್ಲ ಸದಸ್ಯರಿಗೂ ತಲುಪಬೇಕಾದರೆ, ಅವರು ಇಲ್ಲಿನ ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಹೆಚ್ಚಿನ ಸವಲತ್ತುಗಳು ಸಿಗುತ್ತಿವೆ. ಅದೇ ರೀತಿಯಲ್ಲಿ ಟೈಲರ್ಗಳಿಗೂ ಸೌಲಭ್ಯ ಸಿಗುವಂತಾಗಬೇಕು ಎಂದರು.
ಸAಘದ ಸದಸ್ಯರಾಗಿರುವ ಪಿ.ಕೆ. ಚಂದ್ರು ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ, ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ನಂದೀಶ್, ಕುಶಾಲನಗರ ವಲಯ ಸಮಿತಿ ಅಧ್ಯಕ್ಷ ವಿಜಯ, ಸೋಮವಾರಪೇಟೆ ಕ್ಷೇತ್ರ ಸಮಿತಿ ಉಪಾಧ್ಯಕ್ಷೆ ಜಾನಕಿ ಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಅಸ್ಮಾ ಬಾನು ಉಪಸ್ಥಿತರಿದ್ದರು.