ಕಣಿವೆ, ಡಿ. ೨೦ : ಸರ್ಕಾರದ ಸೌಲಭ್ಯಗಳಿಂದ ವಂಚಿತ ಸೂಳೆ ಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿ ಹರಿಣಿ ವಾಸವಿರುವ ಮನೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದರು.
‘‘ಶಕ್ತಿ’’ ಯಲ್ಲಿ ‘ನೆರವಿನ ನಿರೀಕ್ಷೆಯಲ್ಲಿ ನರಳುತ್ತಿರುವ ವಿಶೇಷ ಚೇತನ ಬಾಲಕಿ’ ಎಂಬ ವರದಿ ಪ್ರಕಟಗೊಂಡ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ನೇತೃತ್ವದ ತಂಡ ಬಾಲಕಿ ಹರಿಣಿಯ ಪ್ರಸಕ್ತ ಆರೋಗ್ಯ ಪರಿಸ್ಥಿತಿ ಪರಿಶೀಲಿಸಿದರು. ಅಲ್ಲದೇ ಬಾಲಕಿಯ ಪೋಷಕರ ಜೊತೆ ಚರ್ಚೆ ನಡೆಸಿದರು.
ಈ ಸಂದರ್ಭ ಬಾಲಕಿ ಪೋಷಕರಾದ ಅನಿತಾ ಹಾಗೂ ವಿನುಕೃಷ್ಣ, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕಳೆದ ಬಾರಿಯು ಕೂಡ ಭೇಟಿ ನೀಡಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಬಳಿಕ ಸೌಜನ್ಯದಿಂದಲೇ ಪೋಷಕರನ್ನು ಸಮಾಧಾನಿಸಿದ ಅಧಿಕಾರಿ ಚಂದ್ರಪ್ಪ, ತಮ್ಮ ಮಗಳಿಗೆ ದೊರೆತಿರುವ ಕಾರ್ಡನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ತೋರಿಸಿದ್ದರೆ ಮಾಸಾಶನ ಒದಗಿಸುತ್ತಿದ್ದರು. ಈ ಬಾರಿ ತಾವೇ ಸಂಬAಧಪಟ್ಟ ಇಲಾಖೆಗಳ ಜೊತೆ ವ್ಯವಹರಿಸಿ ಮಾಸಾಶನ ಬರುವಂತೆ ಮಾಡಿಕೊಡುವ ಭರವಸೆ ನೀಡಿದರು. ಗಾಲಿ ಕುರ್ಚಿಯನ್ನು ಕೊಡುವದಾಗಿಯೂ ಹೇಳಿದರು. ದುಸ್ಥಿತಿಯಲ್ಲಿರುವ ಮನೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರಪ್ಪ ಹೇಳಿದರು.
ಸ್ಥಳೀಯ ಐಗೂರು ಪಂಚಾಯಿತಿಗೆ ಪತ್ರ ವ್ಯವಹಾರ ಮಾಡಿ ಕೆಟ್ಟು ಹೋಗಿರುವ ಸೋಲಾರ್ ದೀಪದ ಮರುವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಿ ಚಂದ್ರಪ್ಪ ಭರವಸೆ ನೀಡಿದರು. ಸ್ಥಳಕ್ಕೆ ಸಂಚಾರಿ ಆರೋಗ್ಯ ವೈದ್ಯ ಸಿಬ್ಬಂದಿಗಳು ಹಾಗೂ ಯಡವನಾಡು ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು ಭೇಟಿ ನೀಡಿದ್ದರು.