ಶನಿವಾರಸಂತೆ, ಡಿ. ೨೧: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸುಜಾ ಕುಶಾಲಪ್ಪ ಜಯಗಳಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಪಟ್ಟಣದ ೧ನೇ ವಿಭಾಗದಿಂದ ವೃತ್ತದವರೆಗೆ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ನಂತರ ನಡೆದ ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮುಖಂಡ ರಘು ಮಾತನಾಡಿ, ಗೆಲುವಿಗೆ ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಮನುಕುಮಾರ್, ಭಾರತೀಶ್ ಹಾಗೂ ಇತರರು ಇದ್ದರು.ಚೆಯ್ಯಂಡಾಣೆ: ಸ್ಥಳೀಯ ಬಿಜೆಪಿ ಸ್ಥಾಯಿ ಸಮಿತಿ ಹಾಗೂ ಪಾರಾಣೆ ಬಿಜೆಪಿ, ಕಕ್ಕಬೆ ಬಿಜೆಪಿ ವತಿಯಿಂದ ಮೇಲ್ಮನೆಗೆ ಆಯ್ಕೆಯಾದ ಸುಜಾ ಕುಶಾಲಪ್ಪ ಅವರಿಗೆ ಅದ್ಧೂರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಹಕಾರದಿಂದ ಹಾಗೂ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ಗೆಲುವು ಲಭಿಸಿದೆ. ಮತಗಳ ಅಂತರದಲ್ಲಿ ಏರುಪೇರಾಗಿರಬಹುದು. ಅದರ ಬಗ್ಗೆ ಯಾವುದೇ ಕಾರ್ಯಕರ್ತರು ತಲೆಕೆಡಿಸಿಕೊಳ್ಳದೆ ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಆ ಮೂಲಕ ಕೊಡಗಿನ ಭದ್ರಕೋಟೆಯನ್ನು ಉಳಿಸಲು ಕಾರ್ಯಕರ್ತರು ಪರಿಶ್ರಮ ಪಡಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾದ ಸುಜಾ ಕುಶಾಲಪ್ಪ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನಾನು ಗ್ರಾಮ ಪಂಚಾಯಿತಿ ಹಾಗೂ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಇಬ್ಬರು ಶಾಸಕರು ಹಾಗೂ ಸಂಸದರ ಸಹಾಯದೊಂದಿಗೆ ಕೆಲಸ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪಶ್ಚಿಮಘಟ್ಟ ಕಾರ್ಯಪಡೆ ರಾಜ್ಯ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಉಷಾ ದೇವಮ್ಮ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲು, ಕಕ್ಕಬ್ಬೆ ಬಿಜೆಪಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಚಂಡೀರ ಜಗದೀಶ್, ಪಾರಾಣೆ ಅಧ್ಯಕ್ಷ ರಾಜ, ಪಕ್ಷದ ಮಡಿಕೇರಿ ತಾಲೂಕು ಪ್ರಮುಖ ಕೋಡಿರ ಪ್ರಸನ್ನ ತಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.