ಶ್ರೀಮಂಗಲ, ಡಿ. ೨೦: ಆರ್.ಟಿ.ಸಿ ದಾಖಲೆಯೊಂದಿಗೆ ತಮ್ಮ ಸ್ವಾಧೀನದಲ್ಲಿರುವ ಕಾಫಿ ತೋಟದ ಜಾಗಕ್ಕೆ ಆಕಾರಬಂಧಿ ಹಾಗೂ ನಕಾಶೆ ನೀಡದೆ ಅಲೆದಾಡಿಸುತ್ತಿರುವ; ಮಾಹಿತಿ ಹಕ್ಕು ಕಾಯಿದೆ ಮೂಲಕ ಅಗತ್ಯ ದಾಖಲೆ ಕೇಳಿದರೂ ನಿಗದಿತ ಸಮಯದೊಳಗೆ ನೀಡದೆ ಇರುವ ಕಂದಾಯ ಇಲಾಖೆ ವಿರುದ್ಧ ನ್ಯಾಯಾಂಗದ ಮೊರೆ ಹೋಗಿರುವುದಾಗಿ ಪೊನ್ನಂಪೇಟೆ ಸಮೀಪ ಕುಟ್ಟಂದಿ ಗ್ರಾಮದ ಬೆಳೆಗಾರ ಎ.ಟಿ. ಸುರೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ದಾಖಲೆ ಸಹಿತ ಮಾಹಿತಿ ನೀಡಿದ ಅವರು, ಮಾಜಿ ಸೈನಿಕರಾಗಿದ್ದ ತಂದೆ ಎ.ಕೆ. ತಿಮ್ಮಯ್ಯ ಕೆಲವರ್ಷಗಳ ಹಿಂದೆ ಮರಣಹೊಂದಿದ್ದು, ತಂದೆಗೆ ಮಾಜಿ ಸೈನಿಕರ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗ ಮಂಜೂರಾಗಿದ್ದು, ಕುಟ್ಟಂದಿ ಗ್ರಾಮದಲ್ಲಿರುವ ಸರ್ವೆ ನಂ. ೧೭/೪ ರಲ್ಲಿ ೪.೯೫ ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದೇವೆ.
ಆದರೆ, ಈ ಜಾಗಕ್ಕೆ ಆರ್.ಟಿ.ಸಿ. ಆಗಿದ್ದು, ಇದರೊಂದಿಗೆ ಆಕಾರಬಂದಿ ಮತ್ತು ನಕಾಶೆ ನೀಡಬೇಕಾಗಿದೆ. ಕಳೆದ ೪-೫ ವರ್ಷಗಳಿಂದ
(ಮೊದಲ ಪುಟದಿಂದ) ವೀರಾಜಪೇಟೆ ತಹಶೀಲ್ದಾರ್, ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ, ಪೊನ್ನಂಪೇಟೆ ಕಂದಾಯ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದು, ಅಗತ್ಯವಾದ ನಮ್ಮ ಜಾಗದ ದಾಖಲೆ ನೀಡುತ್ತಿಲ್ಲ. ಅಲೆದಾಡಿ ಸಾಕಾಗಿ ತಾ. ೩೦.೧೦.೨೦೨೧ಕ್ಕೆ ಈ ಬಗ್ಗೆ ಈ ದಾಖಲೆಗಳನ್ನು ಕೋರಿ ಮಾಹಿತಿ ಹಕ್ಕು ಕಾಯಿದೆ ಮೂಲಕ ಕೇಳಿದ್ದೆ. ಆದರೆ ನಿಗದಿತ ೩೦ ದಿನದೊಳಗೆ ದಾಖಲೆ ನೀಡಬೇಕಾಗಿದ್ದರೂ, ೫೦ ದಿನ ಕಳೆದರೂ ಇದುವರೆಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೊರೆ ಹೋಗಿರುವುದಾಗಿ ಎ.ಟಿ. ಸುರೇಶ್ ಹೇಳಿದರು.
ವೀರಾಜಪೇಟೆ ತಾಲೂಕಿನಲ್ಲಿದ್ದ ಪೊನ್ನಂಪೇಟೆ ತಾಲೂಕು ವಿಭಜನೆಯಾಗಿದೆ. ಆದರೆ, ಹೊಸ ತಾಲೂಕು ಉದಯ ಆಗುವ ಮೊದಲೇ ವೀರಾಜಪೇಟೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರಿಂದ, ಆರ್.ಟಿ.ಐ. ಮಾಹಿತಿಯನ್ನು ವೀರಾಜಪೇಟೆ ತಹಶೀಲ್ದಾರರಿಂದ ಕೇಳಲಾಗಿದೆ. ಮಾಹಿತಿ ಸಿಕ್ಕದೆ ಇರುವುದರಿಂದ ಖುದ್ದಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಪಡೆದುಕೊಳ್ಳಲು ಕೇಳಿದ್ದರೂ ಅವರು ದಾಖಲೆ ನೀಡದೆ ಸಬೂಬು ಹೇಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಕಾಶೆ ಮತ್ತು ಆಕಾರಬಂದಿ ನೀಡದೆ ಇರುವುದರಿಂದ ಕೃಷಿ ಸಾಲ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆಯ ಅವ್ಯವಸ್ಥೆ ಮತ್ತು ಲಂಚಗುಳಿತನದಿAದ ಜನ ಸಾಮಾನ್ಯರು ಮತ್ತು ಸಣ್ಣ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ತಾ. ೧೮.೦೨.೨೦೧೯ರಲ್ಲಿ ಮೇಲ್ಕಂಡ ಕಡತವು ವೀರಾಜಪೇಟೆ ತಹಶೀಲ್ದಾರ್ ಅವರ ಕಚೇರಿಯಲ್ಲಿದ್ದು, ಆ ಕಡತದ ಏಕ ವ್ಯಕ್ತಿ ಪ್ರಕರಣದ ಅರ್ಜಿಯ ಯಥಾ ನಕಲನ್ನು ಕೋರಿದ್ದರೂ, ಇದುವರೆಗೆ ನೀಡಿಲ್ಲ ಎಂದು ತಿಳಿಸಿದರು.
ತಮ್ಮಂತೆಯೇ ಮತ್ತಷ್ಟು ಬೆಳೆಗಾರರು ಇಂತಹ ಸಂಕಷ್ಟ ಅನುಭವಿಸುತ್ತಿದ್ದು, ಅವರು ಸಹ ಈ ಮಾರ್ಗದ ಮೂಲಕ ನ್ಯಾಯಪಡೆಯಲು ತಾನು ಮನವಿ ಮಾಡುವುದಾಗಿ ತಿಳಿಸಿದರು.