ಕುಶಾಲನಗರ, ಡಿ. ೨೦ : ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ರಾಜ್ಯ ಪೌರಾಡಳಿತ ಸಚಿವರು ಬೆಳಗಾಂ ವಿಧಾನಸಭೆ ಅಧಿವೇಶನದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಶಾಸಕ ರಂಜನ್ ಪ್ರಶ್ನೆ ಮಾಡಿದ್ದು ಕುಶಾಲನಗರ ಪಟ್ಟಣ ಪಂಚಾಯಿತಿಯ ಬಗ್ಗೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.
ಸೋಮವಾರಪೇಟೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗಳ ಕೆಲವು ಸಮರ್ಪಕ ಮಾಹಿತಿಗಳ ಕೊರತೆಯಿರುವ ಕಾರಣ ಪೌರಾಡಳಿತ ನಿರ್ದೇಶಕರ ಕಚೇರಿಯಿಂದ ಹೆಚ್ಚಿನ ಮಾಹಿತಿ ಕೋರಲಾಗಿದೆ ಎಂದು ತಿಳಿಸಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಸಂಬAಧ ೨೦೨೧ ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
೨೦೧೧ರ ಜನಗಣತಿಯಂತೆ ಕುಶಾಲನಗರದ ಮುಳ್ಳುಸೋಗೆ ಕಂದಾಯ ಗ್ರಾಮ, ಗೊಂದಿಬಸವನಹಳ್ಳಿ, ಗುಮ್ಮನಕೊಲ್ಲಿ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಒಳಗೊಂಡ ಪ್ರದೇಶದಲ್ಲಿ ಸುಮಾರು ೨೭,೩೭೬ ಜನಸಂಖ್ಯೆ ಪ್ರಸ್ತಾವಿತ ಪುರಸಭಾ ವ್ಯಾಪ್ತಿಯಲ್ಲಿದೆ.
೧೧.೧೨ ಚ.ಕಿ.ಮೀ. ವಿಸ್ತೀರ್ಣ
(ಮೊದಲ ಪುಟದಿಂದ) ಪ್ರದೇಶವನ್ನು ಪ್ರಸ್ತಾವಿತ ಕುಶಾಲನಗರ ಪುರಸಭೆ ಹೊಂದಲಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಮಾಹಿತಿ ನೀಡಿದ್ದಾರೆ.
ಕುಶಾಲನಗರ ಪಟ್ಟಣವನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲು ಕಾರಣಕರ್ತರಾದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.