ಮಡಿಕೇರಿ, ಡಿ. ೨೦: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ೫೬ನೇ ವಾರ್ಷಿಕ ಮಹಾಸಭೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಸಂಘವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು ಸಲಹೆಗಳನ್ನು ನೀಡಿದರು. ಸದಸ್ಯರಿಗೆ ಮಹಾಸಭೆಗೆ ನೀಡುವ ಭತ್ಯೆ ಏರಿಕೆ ಮಾಡಬೇಕು. ವಿವಿಧೆಡೆ ಕಾಫಿ ಡಿಪೋಗಳನ್ನು ಸ್ಥಾಪನೆ ಮಾಡಬೇಕು. ಕಂಪೆನಿಗಳ ಸಹಾಯ ಪಡೆದು ಕಾಫಿ ಉದ್ಯಮದ ಬೆಳವಣಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖ ಗೊಳ್ಳಬೇಕು ಎಂಬ ಸಲಹೆಗಳನ್ನು ಸದಸ್ಯರು ನೀಡಿದರು.
(ಮೊದಲ ಪುಟದಿಂದ) ಸಂಘ ಮಾಡಿರುವ ಸಾಲದ ಬಡ್ಡಿಯನ್ನು ಮನ್ನಾಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಚಿವರನ್ನು ನಿಯೋಗ ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದು, ಕ್ರಮಕೈಗೊಳ್ಳಬೇಕು. ಇದರಿಂದ ಸಂಘದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇತರೆಡೆಗಳಲ್ಲಿ ಪೆಟ್ರೋಲ್ ಬಂಕ್ ತೆರೆಯುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕು. ಸಂಘದ ಹೆಸರಿನಲ್ಲಿರುವ ಆಸ್ತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು. ಅಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣಕ್ಕೆ ಮುಂದಾಗಬೇಕೆAದು ಸಂಘದ ಸದಸ್ಯರುಗಳು ಹೇಳಿದರು.
ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಕೊರೊನಾ ಪರಿಸ್ಥಿತಿಯಿಂದ ಸಂಘದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸಂಘವನ್ನು ಲಾಭದ ಹಾದಿಗೆ ತರಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಅಮ್ಮತ್ತಿಯಲ್ಲಿರುವ ಸಂಘದ ಜಾಗ ಅತಿಕ್ರಮಣಗೊಂಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಸಂಘದ ಕಟ್ಟಡಗಳಿಂದ ಹಣ ಪಾವತಿಯಾಗುತ್ತಿದ್ದು, ಹುಣಸೂರಿನ ಪೆಟ್ರೋಲ್ ಬಂಕ್ ಲಾಭದಾಯಕವಾಗಿದೆ ಎಂದರು.
ಸಭೆಗೆ ಮುನ್ನ ಕಳೆದ ಮಹಾಸಭೆ ವರದಿ ಹಾಗೂ ಲೆಕ್ಕಪತ್ರ ಮಂಡಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕರುಗಳಾದ ಎಸ್. ಸುರೇಶ್, ಕೆ. ಕಾವೇರಪ್ಪ, ಎನ್. ಸಂದೀಪ್, ಎಂ.ಡಿ. ಗಣಪತಿ, ಎನ್.ಕೆ. ಅಯ್ಯಣ್ಣ, ರಮೇಶ್ ಮುದ್ದಯ್ಯ, ಪಿ.ಎ. ಮಹೇಶ್, ನಾಪಂಡ ಎಂ. ಕಾಳಪ್ಪ, ಪಾಸುರ ಸಿ. ಕಾವೇರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.