ವೀರಾಜಪೇಟೆ, ಡಿ. ೨೧: ಹವ್ಯಾಸಿ ಪ್ರತಿಭೆಗಳನ್ನು ಗುರುತಿಸುವ ಕೊಡಗು ಕಲಾ ಉತ್ಸವ ೨೦೨೧ ಅನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಕಲೆಯಲ್ಲಿ ಹೃದಯವಂತಿಕೆ ಇರುವುದಿಲ್ಲ. ಆದರೆ ಈ ಉತ್ಸವದಲ್ಲಿರುವ ಚಿತ್ರಗಳು ಹೃದಯದಲ್ಲಿ ಭಾವುಕತೆಯನ್ನು ಮೂಡಿಸುತ್ತವೆ. ಇಂತಹ ಉತ್ಸವಗಳು ಜನರಲ್ಲಿ ಕ್ರಿಯಾತ್ಮಕತೆ, ಆಸಕ್ತಿ ಮತ್ತು ಉತ್ಸಾಹವನ್ನು ಬಿತ್ತುತ್ತವೆ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಗೆ ಆರ್ಟ್ ಗ್ಯಾಲರಿಯ ಅವಶ್ಯಕತೆ ಇದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ಕಲಾವಿದರನ್ನು ಒಗ್ಗೂಡಿಸಿಕೊಂಡು ಜಿಲ್ಲಾಧಿಕಾರಿಯ ಗಮನ ಸೆಳೆದು ಒಂದು ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಲು ಪ್ರಯತ್ನಪಡುವುದಾಗಿಯೂ ತಿಳಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ, ಕಲೆ ಎಲ್ಲರಲ್ಲೂ ಅಡಕವಾಗಿರುತ್ತದೆ. ಅದನ್ನು ಹೊರಹಾಕಲು ಎಲ್ಲರಿಗೂ ವೇದಿಕೆ ಇರುವುದಿಲ್ಲ. ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶಕ್ಕಾಗಿ

(ಮೊದಲ ಪುಟದಿಂದ) ಹೊರಜಿಲ್ಲೆಗಳಿಗೆ ಹೋಗುತ್ತಾರೆ. ಇಲ್ಲಿ ಅವಕಾಶಗಳು ಇಲ್ಲ ಎನ್ನುವ ಭಾವನೆ ಇದೆ. ಆದರೆ ನಿಜವಾಗಿಯೂ ಪ್ರತಿಭೆಯನ್ನು ಹೊರತರಬೇಕಾದರೆ ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೊರಜಗತ್ತಿಗೆ ನಮ್ಮ ಪ್ರತಿಭೆಯನ್ನು ತೋರಿಸಿಕೊಡಬೇಕು ಎಂದರು.

ಕಲಾವಿದ ಸಾಧಿಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಉತ್ಸವವು ಇದೀಗ ಐದನೇ ವರ್ಷಕ್ಕೆ ಕಾಲಿರಿಸಿದ್ದು, ಈ ಬಾರಿ ಜಾನಪದ ಪರಿಷತ್ ಸಹಯೋಗದೊಂದಿಗೆ ಕಲಾ ಉತ್ಸವ ನಡೆಯುತ್ತಿದೆ. ಮುಂದಿನ ವರ್ಷ ಜಾನಪದ ಕಲಾ ಉತ್ಸವವನ್ನು ಆಯೋಜಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ, ವೀರಾಜಪೇಟೆ ಜಾನಪದ ಪರಿಷತ್ ಅಧ್ಯಕ್ಷ ಟಾಮಿ ಥಾಮಸ್, ಜಾನಪದ ಪರಿಷತ್ತಿನ ಮುನೀರ್ ಅಹಮ್ಮದ್, ಎಸ್.ಎಸ್. ಸಂಪತ್ ಕುಮಾರ್, ಲಯನ್ಸ್ ಕ್ಲಬ್ ಸದಸ್ಯರಾದ ಅಮ್ಮಣಿಚಂಡ ಪ್ರವೀಣ್ ಇದ್ದರು.

ವೀರಾಜಪೇಟೆಯ ಚಿತ್ರಕಲಾ ಕಲಾವಿದರಾದ ಸಾದಿಕ್ ಹಂಸಾ ಅವರು ಆಯೋಜನೆ ಮಾಡುತ್ತಿರುವ ಉತ್ಸವ ಇದಾಗಿದ್ದು, ಕೊಡಗಿನ ಹೆಸರಾಂತ ಕಲಾವಿದರ ಚಿತ್ರಕಲೆಗಳು ತಾ. ೩೧ರ ತನಕ ಪ್ರದರ್ಶನಗೊಳ್ಳಲಿವೆ. ಆಸಕ್ತ ಕಲಾವಿದರು ತಮ್ಮ ಪ್ರತಿಭೆಯನ್ನು ಈ ಉತ್ಸವದಲ್ಲಿ ಅನಾವರಣ ಮಾಡಬಹುದಾಗಿದೆ.

ಕಲಾ ಉತ್ಸವದಲ್ಲಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನಾ, ಉದ್ಯಮಿ ಅಂಬೆಕಲ್ಲು ಕುಶಾಲಪ್ಪ ಹಾಜರಿದ್ದರು.