ಗೋಣಿಕೊಪ್ಪಲು, ಡಿ. ೧೯: ಗೋಣಿಕೊಪ್ಪಲು ಕೀರೆಹೊಳೆ, ಕೈತೋಡನ್ನು ಸಂರಕ್ಷಣೆ ಮಾಡುವ ಸಲುವಾಗಿ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಟಿ.ಪೂವಯ್ಯ ಅವರನ್ನು ನೇಮಕ ಮಾಡಲಾಯಿತು.
ಸಮಿತಿಗೆ ಕಾವೇರಿ ಜಲ ಮೂಲ ಸಂರಕ್ಷಣಾ ಹೋರಾಟ ವೇದಿಕೆ ಎಂದು ನಾಮಕರಣ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಕುಸುಮ ಚಂದ್ರಶೇಖರ್, ಪ್ರ. ಕಾರ್ಯದರ್ಶಿ ಯಾಗಿ ನಾರಾಯಣಸ್ವಾಮಿ ನಾಯ್ಡು, ಖಜಾಂಚಿಯಾಗಿ ಎಸ್.ಎನ್. ಸಲ್ಮಾ ಆಯ್ಕೆಗೊಂಡಿದ್ದಾರೆ.
ಗೋಣಿಕೊಪ್ಪಲುವಿನ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಇತ್ತೀಚಿನ ವರ್ಷಗಳಲ್ಲಿ ನಗರದ ಕೀರೆಹೊಳೆ, ಕೈತೋಡು ನದಿಯ ಜಾಗವನ್ನು ಅತಿಕ್ರಮಿಸಿ ಕೊಳ್ಳುವ ಮೂಲಕ ಪ್ರಭಾವಿಗಳು ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಇದೀಗ ಅಕ್ರಮ ತೆರವು ಕಾರ್ಯ ನಡೆಯುತ್ತಿದೆ. ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುವ ಮೂಲಕ ನದಿಯನ್ನು ಉಳಿಸುವ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನೂತನ ಅಧ್ಯಕ್ಷ ಪೂವಯ್ಯ ಮಾತನಾಡಿ ತೆರವುಗೊಂಡ ಜಾಗದಲ್ಲಿ ಕಸ, ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ವಹಿಸಬೇಕು, ನದಿಯ ಬದಿಯಲ್ಲಿ ಗಿಡಗಳನ್ನು ನೆಡಬೇಕು, ಅಲ್ಲಲ್ಲಿ ಸಿ.ಸಿ.ಕ್ಯಾಮರ ಅಳವಡಿಸುವ ಮೂಲಕ ನಗರದ ಕೀರೆಹೊಳೆ, ಕೈತೋಡು ಇನ್ನೂ ಮುಂದೆ ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಬೇಕು, ಗ್ರಾಮ ಪಂಚಾಯಿತಿ ಈ ಬಗ್ಗೆ ವಿಶೇಷ ಗಮನ ಹರಿಸಬೇಕು, ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಗುತ್ತದೆ ಎಂದರು.
ನಗರದ ಹಿರಿಯರಾದ ಜಮ್ಮಡ ಮೋಹನ್ ಮಾತನಾಡಿ, ನದಿಗಳು ಉಳಿಯಲು ಎಲ್ಲರೂ ಶ್ರಮಿಸಬೇಕು. ಇದರಿಂದಾಗಿ ಮುಂದಿನ ಪೀಳಿಗೆಗೆ ಸಹಾಯವಾಗಲಿದೆ. ಎಲ್ಲಾ ಒತ್ತುವರಿ ತೆರವು ಮಾಡಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಶಿಕ್ಷಕರಾದ ಜೆ.ಸೋಮಣ್ಣ, ಕೃಷ್ಣ ಚೈತನ್ಯ ಸೇರಿದಂತೆ ಇನ್ನಿತರ ಪ್ರಮುಖರು ಹಲವು ಉಪಯುಕ್ತ ಸಲಹೆ ನೀಡಿದರು.
ಸಭೆಯಲ್ಲಿ ತುಷಾರ್ ಕುಲಕರ್ಣಿ, ಬಾದುಮಂಡ ಉಮೇಶ್, ಎಚ್.ಎನ್. ಮಂಜುಳ, ಶಕುಂತಲಾ, ಖಾಲಿದ್, ರಾಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.