ನಾಪೋಕ್ಲು, ಡಿ. ೧೯: ಜನಾಂಗದ ಸಂಪ್ರದಾಯ ಆಚರಣೆಗಳು ಸದಾ ಉಳಿಯಬೇಕು. ಮಕ್ಕಳು ಅದನ್ನು ಅನುಸರಿಸಬೇಕು ಎಂದು ನಿವೃತ್ತ ಸುಬೇದಾರ್ ಮೇಜರ್ ಚೆಟ್ಟಿಮಾಡ ಬಾಲಕೃಷ್ಣ ಕರೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜದ ಸಹಯೋಗದಲ್ಲಿ ಮೂರ್ನಾಡಿನ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ದಯಾನಂದ ಕೂಡಕಂಡಿ ಮಾತನಾಡಿ, ಭಾಷೆ ಒಂದು ಮಾಧ್ಯಮ ಅಲ್ಲ. ಅದೊಂದು ಸಂಸ್ಕೃತಿಯಾಗಿದೆ. ಬದುಕು ಮತ್ತು ಭಾಷೆ ಒಂದು ನಾಣ್ಯದ ಎರಡು ಮುಖಗಳು ಎಂದರು. ಮಡಿಕೇರಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಮಾತನಾಡಿ, ಮಾತೃಭಾಷೆಯನ್ನು ಕಡೆಗಣಿಸದೆ ಎಲ್ಲರೂ ಮಾತನಾಡುವುದರೊಂದಿಗೆ ಗೌಡ ಜನಾಂಗದ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿರಿಯಾಪಟ್ಟಣದ ಗ್ರಾಮಲೆಕ್ಕಿಗರಾದ ನೇರ್ಕಜೆ ದೀಪಿಕಾ ರಜಿತ್, ಗೌಡ ಸಮಾಜದ ಉಪಾಧ್ಯಕ್ಷ ತೆಕ್ಕಡೆ ಪ್ರಸನ್ನ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಕರ್ಣಯ್ಯನ ಈಶ್ವರ, ಸಹಾಯಕ ಪ್ರಾಧ್ಯಾಪಕ ಡಾ. ಅಯ್ಯಪ್ಪ ದಂಬೆಕೋಡಿ, ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಬೈಲೆ ಸಹನಾ ಚಂದನ್, ಸಂಗೀತ ಸಾಧನೆ ಮಾಡಿದ ಉಳುವಾರನ ಹರ್ಷಿತ ರಾಮಕೃಷ್ಣ, ಹ್ಯಾಮರ್ ಥ್ರೋದಲ್ಲಿ ರಾಷ್ಟçಮಟ್ಟದ ಸಾಧನೆ ಮಾಡಿದ ರಾಧಕೃಷ್ಣ, ಹರ್ಷಿತ, ರಾಮಕೃಷ್ಣ ಇವರನ್ನು ಸನ್ಮಾನಿಸಲಾಯಿತು. ಗೌಡ ಸಮಾಜದ ಕಾರ್ಯದರ್ಶಿ ನೇರ್ಕಜೆ ಲೋಹಿತ್ ಸೋಮಯ್ಯ ಶಿಕ್ಷಕ ತೆಕ್ಕಡೆ ಬಿ. ಕುಮಾರಸ್ವಾಮಿ, ಗೌಡ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಳುವಾರನ ಕುಮುದಿನಿ ಪ್ರಾರ್ಥಿಸಿದರು. ಅಂಚೆಮನೆ ದಮಯಂತಿ ಸ್ವಾಗತಿಸಿ, ವಂದಿಸಿದರು.