ಕಣಿವೆ, ಡಿ. ೧೯: ಒಡಿಪಿ ಸಂಸ್ಥೆ ವತಿಯಿಂದ ಕೃಷಿರಂಗ ರೈತ ಉತ್ಪನ್ನ ಕೂಟದ ಆಯ್ದ ಕೃಷಿಕರಿಗೆ ಕೃಷಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಮಾಲ್ದಾರೆ, ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದ ಎಫ್‌ಪಿಒ ನೋಂದಾಯಿತ ರೈತರಿಗೆ ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಮೈಸೂರಿನ ಒಡಿಪಿ ಸಂಸ್ಥೆಯ ಕೊಡಗು ವಿಭಾಗದ ಜಾನ್ ಅವರ ನೇತೃತ್ವದಲ್ಲಿ ತೆರಳಿದ ಕೃಷಿಕರಿಗೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕಿರಣ್ ಅವರು ಕಾಫಿ, ಕಾಳುಮೆಣಸು, ಅಡಿಕೆ ಮತ್ತಿತರ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಕೀಟ ಹತೋಟಿಯ ಕುರಿತು ಮಾಹಿತಿ ನೀಡಿದರು.

ಬಳಿಕ ಮಣ್ಣು ಪರೀಕ್ಷೆಯ ಮಹತ್ವದ ಕುರಿತು ವಿಜ್ಞಾನಿ ಡಾ.ಧನಲಕ್ಷಿö್ಮ ಮಾಹಿತಿ ನೀಡಿದರು. ಹವಾಮಾನ ವೈಪರೀತ್ಯಗಳ ಕುರಿತಾಗಿ ವಿಜ್ಞಾನಿ ಡಾ. ಶಭ್ನಂ ರೈತರಿಗೆ ಮಾಹಿತಿ ನೀಡಿದರು.

ನಂತರ ಜೇನು ಕೃಷಿ, ಹಂದಿ, ಕೋಳಿ, ಕುರಿ, ಅಜೋಲಾ ಮತ್ತಿತರ ಸಾಕಣೆಗಳ ಕುರಿತು ರೈತರು ವಿವರವಾಗಿ ಮಾಹಿತಿ ಪಡೆದು ಕೊಂಡರು. ನಂತರ ಚಿಕ್ಕಮಂಗ ಳೂರಿನ ಒಡಿಪಿ ಸಂಸ್ಥೆ ನಡೆಸುತ್ತಿರುವ ಮೌಲ್ಯವರ್ಧಿತ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಬೇಲೂರಿನ ಐತಿಹಾಸಿಕ ಚನ್ನಕೇಶವ ದೇವಾಲಯಕ್ಕೂ ರೈತರು ಭೇಟಿ ನೀಡಿದ್ದರು. ೪೦ ರೈತರಿದ್ದ ಅಧ್ಯಯನ ಪ್ರವಾಸದ ತಂಡದಲ್ಲಿ ಒಡಿಪಿ ಸಂಸ್ಥೆಯ ಕಾರ್ಯಕರ್ತರಾದ ಸುಂದರದಾಸ್, ಧನುಕುಮಾರ್, ವಿಜಯ, ನಾರಾಯಣ ಇದ್ದರು.