ನಾಪೋಕ್ಲು, ಡಿ. ೧೮: ಪಹಣಿ, ಪೌತಿ ಖಾತೆ, ಸೇರಿದಂತೆ ಇತರ ದಾಖಲಾತಿಗಳಲ್ಲಿ ಲೋಪದೋಷಗಳಿದ್ದು, ದೂರು ಸಲ್ಲಿಸಿದರೆ ಅದನ್ನು ಮರುಪರಿಶೀಲಿಸಿ ಸರಿಪಡಿಸಲಾಗುವದು ಎಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಎಸ್.ಮಹೇಶ್ ಹೇಳಿದರು.

ನಾಪೋಕ್ಲು ಶ್ರೀ ಭಗವತಿ ದೇವಳದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದು, ಮಹಿಳೆಯರಿಗೆ ಸಾಮಾಜಿಕ ಭದ್ರತೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ ಯೋಜನೆ, ಖಾತೆ ವರ್ಗಾವಣೆ, ಮನೆ ಮಂಜೂರಾತಿ, ನಿವೇಶನ ಹಂಚಿಕೆ, ಸಕಾಲ ಯೋಜನೆ, ಸರಕಾರಿ ಜಮೀನು ಒತ್ತುವರಿ, ಜಮೀನಿನ ದುರಸ್ತಿ, ವಂಶ ವೃಕ್ಷ, ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ನಂತರ ಅವರು ಕಂದಾಯ ಇಲಾಖೆಗೆ ಸಂಬAಧಿಸಿದ ಅಹವಾಲು ಅರ್ಜಿ ಸ್ವೀಕರಿಸಿದರು. ಬೆಳೆಗಾರÀ ಕೊಂಡಿರ ನಾಣಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ, ಎನ್.ಎಸ್.ರವಿಶಂಕರ್ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಕಲಿಯಂಡ ಹ್ಯಾರಿ ಮಂದಣ್ಣ, ಅರೆಯಡ ಸೋಮಪ್ಪ, ಚೋಕಿರ ಬಾಬಿ ಭೀಮಯ್ಯ ಮತ್ತಿತರರು ಸಮಸ್ಯೆಗಳನ್ನು ತಹಶೀಲ್ದಾರರ ಗಮನಕ್ಕೆ ತಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.ಪಾರ್ವತಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು, ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಪೋಕ್ಲು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಂದ ನಾಡಗೀತೆ, ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಸ್ವಾಗತಿಸಿ, ವಂದಿಸಿದರು.