*ಸಿದ್ದಾಪುರ, ಡಿ. ೧೮ : ಸುಮಾರು ೭೦ ವರ್ಷಗಳ ಹಿಂದೆ ವಾಲ್ನೂರು- ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪನೆಗೆ ಜಾಗ ನೀಡಿದ ದಾನಿಯೊಬ್ಬರ ಮಕ್ಕಳು ಇದೀಗ ‘ನಮ್ಮ ಅಪ್ಪನ ಜಾಗ ನಮಗೆ ಬೇಕು’ ಎಂದು ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಊರಿಗೊಂದು ಶಾಲೆ ಬೇಕು ಎನ್ನುವ ಸದುದ್ದೇಶದಿಂದ ಹಾಲುಮತ ಲಿಂಗಪ್ಪ ಎಂಬವರು ೨.೪೫ ಎಕರೆ ಭೂಮಿಯನ್ನು ೭೦ ವರ್ಷಗಳ ಹಿಂದೆ ದಾನವಾಗಿ ನೀಡಿದ್ದರು. ಆದರೆ ಅಂದಿನ ಕಾಲಘಟ್ಟದಲ್ಲಿ ಯಾರೂ ಭೂಮಿಯ ದಾಖಲೆಯನ್ನು ಸರಿ ಹೊಂದಿಸುವ ಮತ್ತು ಶಾಲೆಯ ಜಾಗವೆಂದು ಅಧಿಕೃತಗೊಳಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಇದರ ಪರಿಣಾಮ ಇಂದು ಲಿಂಗಪ್ಪ ಅವರ ಮಕ್ಕಳಾದ ಕಮಲಮ್ಮ, ಬೋಜಮ್ಮ ಹಾಗೂ ದಮಯಂತಿ ಅಪ್ಪನ ಆಸ್ತಿ ನಮಗೆ ಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶಾಲಾ ಕಟ್ಟಡವಿರುವ ಜಾಗವನ್ನು ಬಿಟ್ಟುಕೊಡಲು ಸಿದ್ಧ, ಆದರೆ ಉಳಿದಿರುವ ಖಾಲಿ ಜಾಗ ನಮಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರಿಗೆ ಈ ವಿವಾದ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಾರಣ ಜಾಗಕ್ಕೆ ಸಂಬAಧಿಸಿದAತೆ ಸೂಕ್ತ ದಾಖಲೆಗಳು ಇವರ ಬಳಿ ಇಲ್ಲ.

ತಂದೆ ದಾನ ನೀಡಿದ ಜಾಗಕ್ಕಾಗಿ ಮಕ್ಕಳು ೭೦ ವರ್ಷಗಳ ನಂತರ ಹಕ್ಕು ಮಂಡಿಸಿದ ತಕ್ಷಣ ಮುಖ್ಯೋಪಾಧ್ಯಾಯ ಕುಮಾರ್ ಅವರು ದಾಖಲೆಗಳನ್ನು ಸರಿ ಹೊಂದಿಸಲು ಮುಂದಾದರಾದರೂ ಲಿಂಗಪ್ಪ ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಅತಂತ್ರ ವ್ಯವಸ್ಥೆ ಸೃಷ್ಟಿಯಾಗಿದೆ. ಶಾಲೆಯ ಅಭ್ಯುದಯಕ್ಕಾಗಿ ನಿತ್ಯ ಶ್ರಮಿಸುತ್ತಿದ್ದ ಕುಮಾರ್ ಅವರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಕಂಪ್ಯೂಟರ್, ಶೈಕ್ಷಣಿಕ ಪರಿಕರಗಳು ಹಾಗೂ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮುಖ್ಯೋಪಾಧ್ಯಾಯರು ಯಶಸ್ವಿಯಾಗಿದ್ದಾರೆ.

ಅಲ್ಲದೆ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಾಲೆಯ ಅಭಿವೃದ್ಧಿಗಾಗಿ ಸುಮಾರು ೧೦ ಲಕ್ಷ ರೂ.ಗಳನ್ನು ಅವರ ಮೂಲಕ ವಿನಿಯೋಗಿಸಿದ್ದಾರೆ. ಆದರೆ ಇಂದು ಶಾಲೆಯ ಜಾಗದ ವಿವಾದ ನ್ಯಾಯಾಲಯದಲ್ಲಿರುವುದರಿಂದ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರಲ್ಲಿ ಸಹಜವಾಗಿಯೇ ಆತಂಕ ಹಾಗೂ ಬೇಸರವನ್ನು ಮೂಡಿಸಿದೆ. ಒಂದು ವೇಳೆ ಸೋಲಾದರೆ ವಿದ್ಯಾರ್ಥಿಗಳ ಗತಿ ಏನು ಎನ್ನುವ ಪ್ರಶ್ನೆ ಕಾಡತೊಡಗಿದೆ.