ಮಡಿಕೇರಿ, ಡಿ. ೧೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಮರಗೋಡು ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪುದಿಯನೆರವನ ರೇವತಿ ರಮೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಅರಭಾಷೆ ಅಕಾಡೆಮಿ ಪ್ರಾರಂಭವಾಗಿ ಇಂದಿಗೆ ಹತ್ತು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಅಕಾಡೆಮಿಯ ಸ್ಥಾಪನೆಗೆ ಶ್ರಮಿಸಿದ ವ್ಯಕ್ತಿಗಳನ್ನು ಎಂದಿಗೂ ಮರೆಯಕೂಡದು. ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಮೇಲೆ ಅಭಿಮಾನವಿರಬೇಕು. ಜನಾಂಗದ ಪದ್ಧತಿ ಪರಂಪರೆಯನ್ನು ಎಲ್ಲರು ಉಳಿಸಿ ಬೆಳೆಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿ ಆಕಾಶವಾಣಿಯ ಸುದ್ದಿವಾಚಕ ಉಳುವಾರನ ರೋಶನ್ ವಸಂತ್ ಅವರು ಮಾತನಾಡಿ, ಅರೆಭಾಷೆ ಅಕಾಡೆಮಿ ಪ್ರಾರಂಭವಾಗಿ ಇಂದಿಗೆ ಹತ್ತು ವರ್ಷ ಪೂರ್ಣಗೊಂಡು, ಹನ್ನೊಂದನೆ ವರ್ಷಕ್ಕೆ ಕಾಲಿಟ್ಟಿರುವುದು ಗೌಡ ಜನಾಂಗಕ್ಕೆ ಹೆಮ್ಮೆಯ ವಿಚಾರ. ಅಕಾಡೆಮಿ ಪ್ರಾರಂಭವಾದ ನಂತರ ಭಾಷೆ ತುಂಬಾ ವಿಶಾಲವಾಗಿ ಬೆಳೆದಿದೆ. ಅರೆಭಾಷೆ ನಮ್ಮ ಜೀವನದ ಬೇರು. ನಮ್ಮ ತಾಯಿ ಭಾಷೆ. ಸದೃಢವಾದ ಈ ಭಾಷೆಯನ್ನು ಮಾತನಾಡಲು ಯಾರು ಕೂಡ ಹಿಂಜರಿಯಕೂಡದು. ಇಂದಿನ ಯುವ ಜನಾಂಗ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಬೇಕು ಎಂದರು.

ಸಮಾಜದ ಅಧ್ಯಕ್ಷ ಕಟ್ಟೆಮನೆ ಕೆ. ಜನಾರ್ದನ ಅವರು ಮಾತನಾಡಿ, ಅರೆಭಾಷೆಯನ್ನು ಎಲ್ಲರೂ ಉಳಿಸಿ ಬೆಳಸಬೇಕು. ನಮ್ಮ ಪದ್ಧತಿ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ಮರೆಯಕೂಡದು. ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಮೇಲೆ ಅಭಿಮಾನವಿರಬೇಕು. ಈ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ದಿನಾಚರಣೆಯ ಪ್ರಯುಕ್ತ ಸಂಸ್ಕೃತಿ, ಸಂಪ್ರದಾಯದ ಕುರಿತು ರಸಪ್ರಶ್ನೆ, ವಾಲಗ ಕುಣಿತ, ಸೋಬಾನೆ ಪದ ಪೈಪೋಟಿ ನಡೆಯಿತು. ವೀಜೆತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪೋತಂಡ್ರ ತೇಜಪ್ರಸಾದ್, ಬೊಳ್ಳೂರು ಜಾನಕಿ ಉದಯಕುಮಾರ್, ಕಟ್ಟೆಮನೆ ಪ್ರೇಮ, ತೋಟಂಬೈಲು ಪಾರ್ವತಿ, ಗ್ರಾಮ ಪಂಚಾಯಿತಿ ಸದÀಸ್ಯೆ ಬಡುವಂಡ್ರ ಕವಿತಾ ಬೆಳ್ಯಪ್ಪ, ಸಮಾಜದ ನಿರ್ದೇಶಕರು ಸೇರಿದಂತೆ ಜನಾಂಗ ಬಾಂಧವರು ಭಾಗವಹಿಸಿದ್ದರು.