ಗೋಣಿಕೊಪ್ಪಲು, ಡಿ. ೧೭: ಭವಿಷ್ಯದಲ್ಲಿ ವಿಶ್ವಯುದ್ಧ ನೀರಿಗಾಗಿ ನಡೆಯಲಿದೆ. ಜಾಗತಿಕ ವಿಶ್ವದಲ್ಲಿ ಹವಾಮಾನ ಏರುಪೇರು ಉಂಟಾಗು ತ್ತಿದ್ದು ಭವಿಷ್ಯದಲ್ಲಿ ಕೊಡಗಿನಲ್ಲಿ ನೀರಿನ ಕ್ಷಾಮ ತಲೆದೋರಿದರೆ ಮಹಾನಗರದ ಜನತೆಯ ಹಾಹಾಕಾರ ಮುಗಿಲು ಮುಟ್ಟಲಿದೆ. ಕೊಡಗಿನ ಕಾಡುಗಳ ಸಂರಕ್ಷಣೆಯ ಹೊಣೆಯನ್ನು ಬೆಂಗಳೂರಿಗರೂ ಹೊರಬೇಕು. ಕೊಡಗಿನ ಪರಿಸರವನ್ನು ದೇವರೆಂದು ಬಾವಿಸಿದ್ದಲ್ಲಿ ಮಾತ್ರ ಅರಣ್ಯ, ವನ್ಯಜೀವಿ ಸಂರಕ್ಷಣೆ ಸಾಧ್ಯ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜು ಡೀನ್ ಡಾ. ಸಿ.ಜಿ. ಕುಶಾಲಪ್ಪ ಹೇಳಿದರು. ಗೋಣಿಕೊಪ್ಪಲು ಸುದ್ದಿಸಂಸ್ಥೆಯ ೯ನೇ ವಾರ್ಷಿಕೋತ್ಸವ ಅಂಗವಾಗಿ, ಗೋಣಿಕೊಪ್ಪಲು ಟೈಗರ್ ಪಗ್ ಇಕೋ ಕ್ಲಬ್ ಮತ್ತು ಬೆಂಗಳೂರು ಸೃಷ್ಠಿ ಮೀಡಿಯಾ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಾಣಚ್ಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪ್ರಕೃತಿ ಶಿಬಿರ, ನಾಗರಹೊಳೆಯಲ್ಲಿ ವನ್ಯಪ್ರಾಣಿಗಳ ಕುರಿತಾದ ಸಾಕ್ಷ÷್ಯಚಿತ್ರ ಪ್ರದರ್ಶನ, ವನ್ಯಪ್ರೇಮಿ ಚಿಣ್ಣಪ್ಪನವರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಪೂರ್ವಜರು ಕಾಡು ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಗಾಗಿ ದೇವರ ಕಾಡುಗಳನ್ನು ಭಕ್ತಿ ಭಾವದೊಂದಿಗೆ ಪೂಜಿಸುವಂತೆ ಮಾಡಿದರು. ಒಂದು ದೇಶ ಸುಭಿಕ್ಷವಾಗಿರಬೇಕಾದರೆ ಶೇ.೩೩ ರಷ್ಟು ಅರಣ್ಯ ಪ್ರದೇಶ ಇರಬೇಕು. ಭಾರತವು ಅತೀ ಹೆಚ್ಚು ಜಾನುವಾರು ಹಾಗೂ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದರೆ ಮಾನವನ ಹಸ್ತಕ್ಷೇಪದಿಂದಾಗಿ ಶ್ರೀಮಂತ ಮಳೆ ಕಾಡುಗಳು, ಇಲ್ಲಿನ ವನ್ಯಜೀವಿಗಳು ವಿನಾಶದಂಚಿನಲ್ಲಿದೆ. ಅರಣ್ಯ ಪಾಠ ಹೇಳಿಸಿಕೊಳ್ಳುವವರಿಗೆ ಚಿಣ್ಣಪ್ಪ ಉತ್ತಮ ಗುರು. ಅವರಿಂದ ತಿಳಿಯುವುದು ತುಂಬಾ ಇದೆ ಎಂದರು.

ಮಡಿಕೇರಿ ಉಪ ಅರಣ್ಯ ವಿಭಾಗದ ಡಿಸಿಎಫ್ ಎ.ಟಿ. ಪೂವಯ್ಯ ಮಾತನಾಡಿ, ನಾಗರಹೊಳೆ ಅಭಯಾರಣ್ಯದಲ್ಲಿ ಮೋಜು ಮಸ್ತಿಗೆ ಅವಕಾಶವಿಲ್ಲ. ಪ್ರಕೃತಿ ಮತ್ತು ಮಾನವನ ಸಂಬAಧ ತಾಯಿ-ಮಗುವಿನಂತಿರಬೇಕು. ಪ್ರಕೃತಿಯನ್ನು ಮಗುವಿನಂತೆ ಸಂರಕ್ಷಿಸುವದು ಎಲ್ಲರ ಹೊಣೆ ಎಂದು ಹೇಳಿದರು.

ನಾಗರಹೊಳೆಯಲ್ಲಿ ತಮ್ಮದೇ ‘ಡಿಜಿಟಲ್ ವರ್ಣ ಚಿತ್ರ’ವನ್ನು ಅಭಿಮಾನಿಗಳ ಪರವಾಗಿ ಸ್ವೀಕರಿಸಿ ಮಾತನಾಡಿದ ‘ರಾಜ್ಯ ವೈಲ್ಡ್ ಲೈಫ್ ಫಸ್ಟ್’ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ ಅವರು, ಅರಣ್ಯದ ಮೇಲೆ ಮಾನವನ ಹಸ್ತಕ್ಷೇಪ ಸಲ್ಲದು. ವನ್ಯಜೀವಿ ವಲಯದಲ್ಲಿ ಹುಲ್ಲುಕಡ್ಡಿಯನ್ನೂ ಮುಟ್ಟುವ ಅಧಿಕಾರ ನಮಗಿಲ್ಲ. ಅಭಿವೃದ್ಧಿಯ ನೆಪದಲ್ಲಿ ನಿಸರ್ಗಕ್ಕೆ ಹಾನಿಯಾಗ ಬಾರದು ಎಂದು ಕರೆ ನೀಡಿದರು.

ಕಾಕೂರು ಗ್ರಾಮ ಉರಗ ಪ್ರೇಮಿ, ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ರಕ್ಷಣೆ ಮಾಡಿರುವ ಬೋಸ್ ಮಾದಪ್ಪ ಅವರು ಶಿಬಿರಾರ್ಥಿಗಳಿಗೆ ಭಾರತದ ವಿಷಪೂರಿತ ಹಾವುಗಳು ಹಾಗೂ ರೈತ ಸ್ನೇಹಿ ಹಾವುಗಳ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಸಂಸ್ಥೆ ಮುಖ್ಯಸ್ಥ ಟಿ.ಎಲ್. ಶ್ರೀನಿವಾಸ್, ಗೋಣಿಕೊಪ್ಪಲು ಪ್ರೌಢಶಾಲೆ ‘ಟೈಗರ್ ಪಗ್ ಇಕೋ ಕ್ಲಬ್’ ಸಂಚಾಲಕ ಕೃಷ್ಣ ಚೈತನ್ಯ ಅವರು ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಕುರಿತು ಶಿಬಿರಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಸೃಷ್ಠಿ ಮೀಡಿಯಾ ಅಕಾಡೆಮಿ ಹಾಗೂ ಗೋಣಿಕೊಪ್ಪಲು ಪ್ರೌಢಶಾಲೆಯ ವಿದ್ಯಾರ್ಥಿಗಳು, ಸುದ್ದಿ ಸಂಸ್ಥೆ ಹಿರಿಯ ವಿದ್ಯಾರ್ಥಿಗಳಾದ ಗೀತಾ ನಾಯ್ಡು, ಗಾನಶ್ರೀ, ನಾಗರಹೊಳೆ ಎಸಿಎಫ್ ಗೋಪಾಲ್, ಆರ್.ಎಫ್.ಓ. ಗಿರೀಶ್, ವನ್ಯಜೀವಿ ತಜ್ಞ ಗೋಪಿ, ಬೀರುಗದ ಮುರುಳೀಧರ್, ಸಮಾಜ ಸೇವಕಿ ಕೊಣಿಯಂಡ ಕಾವ್ಯ ಸಂಜು, ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ದಿಲ್ಲನ್ ಚಂಗಪ್ಪ, ರಿಸ್ತಾ ಚಂಗಪ್ಪ, ಡಯಾನ ಪೂವಯ್ಯ, ಮಮತಾ ಕುಶಾಲಪ್ಪ, ಪತ್ರಕರ್ತ ಜೆ. ಸೋಮಣ್ಣ, ಹುಣಸೂರುವಿನ ದೇವರಾಜು, ಬೆಂಗಳೂರಿನ ಪತ್ರಕರ್ತ ಶಿವಕುಮಾರ್, ಜೀಜೇಶ್ ಕೃಷ್ಣ, ಪ್ರೀತಮ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ನಾಗರಹೊಳೆ ಸಫಾರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.