ಮಡಿಕೇರಿ, ಡಿ. ೧೭: ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿರುವದಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ|| ಅಶ್ವಥ್‌ನಾರಾಯಣ್ ಅವರು ತಿಳಿಸಿದ್ದಾರೆ.

ಅಧಿವೇಶನದಲ್ಲಿ ಶಾಸಕ ರಂಜನ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿನ ತಾಲೂಕುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಾಸೆಯನ್ನು ಚಿಕ್ಕಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವು ಸಮರ್ಪಕವಾಗಿ ಈಡೇರಿಸುತ್ತಿರುವದರಿಂದ ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾನೂನು ಪದವಿ ಪಡೆಯಲು ವಿದ್ಯಾರ್ಥಿಗಳು ಹೊರ ಜಿಲ್ಲೆಗೆ ಹೋಗುತ್ತಿರುವುದರಿಂದ ಕೊಡಗು ಜಿಲ್ಲೆ ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇಲ್ಲವೇ ಮಡಿಕೇರಿಯಲ್ಲಿ ಕಾನೂನು ಪದವಿ ಕಾಲೇಜು ಪ್ರಾರಂಭಿಸಿದಲ್ಲಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಕಾನೂನು ಕಾಲೇಜು ಮಂಜೂರಾತಿ ಮಾಡಲು ಸರ್ಕಾರ ಚಿಂತನೆ ನಡೆಸಿದೆಯೇ ಎಂದು ಶಾಸಕರು ವಿವರ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಸಚಿವ ಅಶ್ವಥ್‌ನಾರಾಯಣ್ ಅವರು ಕಾನೂನು ಪದವಿ ಕಾಲೇಜನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಘಟಕ ಕಾಲೇಜನ್ನಾಗಿ ಸ್ಥಾಪಿಸಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಅಧಿನಿಯಮ ೨೦೦೦ರಲ್ಲಿ ಅವಕಾಶವಿರುವುದಿಲ್ಲ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧಿನಿಯಮ ೨೦೦೯ರ ಪ್ರಕರಣ ೮೯(೨)ರಲ್ಲಿ ಉಪಬಂಧಿಸಿರುವAತೆ, ಸದರಿ ಅಧಿನಿಯಮ ಜಾರಿಗೆ ಬಂದ ದಿನಾಂಕ ಅಥವಾ ನಂತರದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಗಳನ್ನು ಹೊರತುಪಡಿಸಿ ಯಾವುದೇ ವಿಶ್ವವಿದ್ಯಾಲಯಗಳು, ಕಾನೂನು ಪದವಿ ಕಾಲೇಜುಗಳನ್ನು ಆರಂಭಿಸಲು ಹಾಗೂ ಸಂಯೋಜನೆಗೊಳಿಸಲು ಅವಕಾಶವಿರುವುದಿಲ್ಲ. ಆದುದರಿಂದ ಹೊಸದಾಗಿ ಕಾನೂನು ಪದವಿ ಕಾಲೇಜುಗಳನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಳಿಸುವ ಮೂಲಕ ಹೊಸದಾಗಿ ಸ್ಥಾಪಿಸುವ ವಿಷಯವು ಕಾನೂನು ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿಸಿದ್ದಾರೆ.