ಮಡಿಕೇರಿ, ಡಿ. ೧೬: ಕೋವಿಡ್ ನಿರೋಧಕ ಲಸಿಕೆ ವಿತರಣೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ೨ನೇ ಸ್ಥಾನ ಪಡೆದುಕೊಂಡಿದ್ದು, ೨೦೧೧ ರ ಜನಸಂಖ್ಯಾ ಆಧಾರಿತ ಶೇ.೯೯.೫೪ರಷ್ಟು ಮೊದಲನೆಯ ಡೋಸ್ ಹಾಗೂ ಶೇ.೮೬.೪೧ ೨ನೇ ಡೋಸ್ ಲಸಿಕೆ ಜಿಲ್ಲೆಯಲ್ಲಿ ಪೂರೈಕೆಯಾಗಿದೆ.
ಜಿಲ್ಲೆಯಲ್ಲಿ ೧೮ ರ ವಯೋಮಿತಿ ಮೇಲ್ಪಟ್ಟ ಒಟ್ಟು ೪ ಲಕ್ಷ ಲಸಿಕಾ ಫಲಾನುಭವಿಗಳ
ಲಸಿಕಾಕರಣ-ರಾಜ್ಯದಲ್ಲಿ ಕೊಡಗು ಜಿಲ್ಲೆ ೨ನೇ ಸ್ಥಾನ
(ಮೊದಲ ಪುಟದಿಂದ) ಪೈಕಿ, ಈಗಾಗಲೇ ೩,೯೮,೧೬೬ ಮಂದಿ ಕೋವಿಡ್ ನಿರೋಧಕ ಲಸಿಕೆಯ ಮೊದಲನೆಯ ಡೋಸ್ ಪಡೆದುಕೊಂಡಿದ್ದಾರೆ. ೩,೪೫,೬೮೬ ಮಂದಿ ೨ನೆಯ ಡೋಸ್ ಪಡೆದುಕೊಂಡಿದ್ದಾರೆ. ಒಟ್ಟು ೮,೯೯೮ ಲಸಿಕಾ ಡೋಸ್ಗಳು ಖಾಸಗಿ ಆಸ್ಪತ್ರೆ, ಸಂಸ್ಥೆಗಳ ಮೂಲಕ ಪೂರೈಕೆಯಾಗಿವೆ. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದ ಬಹಳಷ್ಟು ಮಂದಿ ಇದೀಗ ಓಮಿಕ್ರಾನ್ ತಳಿ ಬಂದ ನಂತರ, ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದು, ಲಸಿಕಾಕರಣದ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ. ಗೋಪಿನಾಥ್ ಅವರು ತಿಳಿಸಿದ್ದಾರೆ.
ಬೆಂಗಳೂರು ನಗರ ಪ್ರದೇಶದ ೨ನೇ ಡೋಸ್ ಲಸಿಕೆ ಪೂರೈಕೆ ಶೇ.೯೫ ರಷ್ಟಾಗಿದ್ದು, ರಾಜ್ಯಕ್ಕೆ ಮೊದಲನೆಯ ಸ್ಥಾನ ಪಡೆದಿದೆ. ಕೊಡಗಿನ ಬಳಿಕ ಮಂಡ್ಯ ಜಿಲ್ಲೆಯು ಸ್ಥಾನ ಪಡೆದಿದ್ದು, ಶೇ.೮೧ ರಷ್ಟು ಎರಡನೆಯ ಡೋಸ್ ಲಸಿಕೆ ಪೂರೈಸಿದೆ.
ರಾಜ್ಯದಲ್ಲಿ ಕೊನೆಯ ೩ ಸ್ಥಾನಗಳನ್ನು ಹಾವೇರಿ (ಶೇ.೬೩), ರಾಯಚೂರು (ಶೇ.೫೮) ಹಾಗೂ ಗುಲ್ಬರ್ಗಾ (ಶೇ.೫೬) ಜಿಲ್ಲೆಗಳು ಪಡೆದುಕೊಂಡಿವೆ.