ಕಣಿವೆ, ಡಿ. ೧೬: ಆಡುವ ಮಕ್ಕಳೊಂದಿಗೆ ಸೇರಿ ಆಟವಾಡಿ ನಲಿಯಬೇಕಾದ; ಪೆನ್ನು ಪೇಪರ್ ಹಿಡಿದು ಅಕ್ಷರಗಳನ್ನು ತಿದ್ದುತ್ತಾ ಕಲಿಯಬೇಕಾದ ಮಗುವೊಂದು ಇತರೇ ಮಕ್ಕಳು ಆಟವಾಡಿ ನಕ್ಕು ನಲಿಯುವುದನ್ನು ಕುಳಿತಲ್ಲಿಂದಲೇ ನೋಡಿ ಸಂತಸಪಡುವ ಅಸಹಾಯಕತೆಗೆ ಒಳಗಾಗಿದ್ದು, ಅಂಗವೈಕಲ್ಯತೆಗೆ ತುತ್ತಾದ ಗಿರಿಜನ ಕುಟುಂಬದ ಹೆಣ್ಣುಮಗುವೊಂದರ ನೆರವಿಗೆ ಧಾವಿಸುವಲ್ಲಿ ಸಂಬAಧಿಸಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ. ಕುಶಾಲನಗರ ತಾಲೂಕಿನ ಯಡವನಾಡು ಬಳಿಯ ಸೂಳೆಬಾವಿ ಜೇನುಕುರುಬರ ಹಾಡಿಯ ಅನಿತಾ ಹಾಗೂ ವಿನುಕೃಷ್ಣ ದಂಪತಿಗಳ ೮ ವರ್ಷ ಪ್ರಾಯದ ಹರಿಣಿ ಎಂಬ ಹೆಣ್ಣು ಮಗು ಹುಟ್ಟಿದ ಆರೇ ತಿಂಗಳಲ್ಲಿ ಆಕಸ್ಮಿಕವಾಗಿ ಅಂಗವೈಕಲ್ಯತೆಗೆ ತುತ್ತಾಗಿದೆ.

ಅಂದರೆ ಬಾಲಕಿಯ ಎಡಪಾರ್ಶ್ವ ಸಂಪೂರ್ಣವಾಗಿ ಊನಗೊಂಡಿದೆ. ಇದರಿಂದಾಗಿ ಈ ಮಗುವಿನ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ಚೇತನ ಈ ಹೆಣ್ಣು ಮಗುವನ್ನು ಆರೈಕೆ ಮಾಡಲು ದಿನಂಪ್ರತೀ ಈಕೆಯ ಅಪ್ಪ ಅಥವಾ ಅಮ್ಮಾ ಯಾರಾದರು ಒಬ್ಬರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿ ಮಾಡಿ ಜೀವನ ನಡೆಸುವ ಈ ದಂಪತಿಗಳಿಗೆ ಮೂರು ಹೆಣ್ಣು ಮಕ್ಕಳು. ಮೂವರ ಪೈಕಿ ಈ ವಿಶೇಷಚೇತನ ಮಗು ಮೊದಲನೆಯದು. ಯಡವನಾಡು ಅರಣ್ಯದೊಳಗೆ ಬದುಕು ಕಟ್ಟಿಕೊಂಡಿರುವ ಈ ಕುಟುಂಬ ಕಳೆದ ಏಳು ವರ್ಷಗಳ ಹಿಂದೆ ಹುಲ್ಲು ಹೊದ್ದ ಗುಡಿಸಲಲ್ಲಿ ವಾಸವಿತ್ತು. ಮಹಾಶಿವರಾತ್ರಿ ದಿನದ ಸಂದರ್ಭವದು. ಭಯಂಕರ ಗುಡುಗು ಹಾಗೂ ಸಿಡಿಲಿನ ಪ್ರತಾಪದೊಂದಿಗೆ ಜೋರು ಮಳೆ ಸುರಿಯುತ್ತಿದ್ದಾಗ ಗ್ರಹಚಾರ ಕೆಟ್ಟು ಸಿಡಿಲಿನ ಹೊಡೆತಕ್ಕೆ ಸಿಲುಕಿದ ಈ ಮಗುವಿಗೆ ಶಾಶ್ವತವಾಗಿ ಅಂಗವೈಕಲ್ಯತೆಯಾಯಿತು ಎಂದು ಮಗುವಿನ ತಾತ ವಸಂತ ಎಂಬವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ವಿವರಿಸಿದರು.

‘ಕಳೆದ ವರ್ಷ ನಮ್ಮ ಈ ಮಗುವಿನ ಬಗ್ಗೆ ಇದೇ ‘ಶಕ್ತಿ’ಯಲ್ಲಿ ವರದಿ ಬಂದೊಡನೆ ಸೋಮವಾರಪೇಟೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಓಡೋಡಿ ಬಂದು ನಮ್ಮಿಂದ ಅವರಿಗೆ ಬೇಕಾದ ಮಾಹಿತಿ ಪಡೆದುಕೊಂಡು ಹೋಗಿದ್ದರು.

ಬಳಿಕ ಮಡಿಕೇರಿಗೂ ಮಗುವನ್ನು ಕರೆದು ತರಲು ಹೇಳಿದ್ದರು. ಅದರಂತೆ ಸೋಮವಾರಪೇಟೆ ಹಾಗೂ ಮಡಿಕೇರಿ ಎರಡೂ ಕಡೆ ಮಗುವನ್ನು ಕಷ್ಟಪಟ್ಟು ಹೊತ್ತುಕೊಂಡು ಹೋಗಿದ್ದೆ. ಆದರೆ ಆ ಅಧಿಕಾರಿಗಳು ಇದುವರೆಗೂ ನಮ್ಮ ಮೊಮ್ಮಗುವಿಗೆ ಮಾಸಾಶನವಾಗಲೀ, ಗಾಲಿ ಸೈಕಲ್ ಆಗಲೀ ಅಥವಾ ಯಾವುದೇ ಆರೋಗ್ಯ ಪರಿಕರ ಕಿಟ್ ಆಗಲೀ ಕೊಟ್ಟಿಲ್ಲ ಎಂದು ಅಧಿಕಾರಿಗಳ ಮೇಲೆ ಅಸಹನೆ ವ್ಯಕ್ತಪಡಿಸಿದರು.’

ಅವರು ಅಲ್ಲಿ ಕರೆ ತನ್ನಿ ಇಲ್ಲಿ ಕರೆ ತನ್ನಿ ಅಂತಾರೆ. ಆದರೆ ನನ್ನ ಬಳಿ ಸ್ವಂತ ವಾಹನವಿದೆಯೇ ಕರೆದೊಯ್ಯಲು..? ಕಾಡಿನೊಳಗಿನ ಮನೆಯಿಂದ ಬಸ್ಸು ಬರುವ ರಸ್ತೆಗೆ ಒಂದು ಕಿಮೀ ಹೊತ್ತು ನಡೆಯಬೇಕು. ಅಲ್ಲಿಂದ ಮಡಿಕೇರಿ ಸೋಮವಾರಪೇಟೆಗಳಿಗೆ ಹೊತ್ತೊಯ್ಯಲು ಕಷ್ಟವಾದರೂ ಕೂಡ ಏನೋ ಪರಿಹಾರ ಸಿಗಬಹುದು ಅಂತ ಹೋದೆ. ಆದರೆ ನಮ್ಮ ಗಿರಿಜನರ ಮೇಲೆ ಕಾಳಜಿ ತೋರದ ಅಧಿಕಾರಿಗಳು ಇನ್ನು ಗಿರಿಜನ ಮಕ್ಕಳ ಕಲ್ಯಾಣದ ಬಗ್ಗೆ ಏನು ತಾನೇ ಮಾಡಿಯಾರು ? ಅದಕ್ಕೆ ನಾನು ನನ್ನ ಮಗಳು ಹಾಗೂ ಅಳಿಯ ಸರ್ಕಾರದ ಸಹವಾಸವೇ ಬೇಡ ಅಂತ ಕೂಲಿ ಮಾಡಿ ತಂದು ಮಗುವನ್ನು ಸಾಕ್ತಾ ಇದ್ದೇವೆ ಎನ್ನುತ್ತಲೇ ವ್ಯವಸ್ಥೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ದೇಹದ ಎಡ ಪಾರ್ಶ್ವ ಸಂಪೂರ್ಣ ಊನಗೊಂಡಿರುವ ಈ ಬಾಲಕಿ ಕುಳಿತಲ್ಲೇ ಕೂರುತ್ತಾಳೆ ಹೊರತು, ಎದ್ದು ನಿಂತು ಹೆಜ್ಜೆ ಹಾಕಲಾರಳು. ಈ ಮಗುವಿಗೆ ಹಾಲು - ನೀರು ಕುಡಿಸಲು, ತಿಂಡಿ - ಊಟ ಮಾಡಿಸಲು, ಸ್ನಾನ - ಶೌಚ ಮಾಡಿಸಲು, ಬಟ್ಟೆಗಳನ್ನು ತೊಡಿಸಲು ಯಾರಾದರೂ ಒಬ್ಬರು ಜೊತೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಬಾಲಕಿಯ ಅಪ್ಪ ಮನೆಯಲ್ಲಿದ್ದರೆ ಅಮ್ಮ ಕೂಲಿಗೆ ಹೋಗಬೇಕು. ಅಮ್ಮ ಮಗು ಜೊತೆಯಲ್ಲಿದ್ದರೆ ಅಪ್ಪ ಕೂಲಿಗೆ ಹೋಗಿ ದುಡಿಯಬೇಕು. ಮೊದಲೇ ಕಾಡಾನೆಗಳ ಆವಾಸ ಸ್ಥಾನವಾದ ಈ ಸೂಳೆಬಾವಿ ಹಾಡಿಯಲ್ಲಿ ಮಗುವೊಂದನ್ನೇ ಬಿಟ್ಟು ಹೋಗಲು ಅಸಾಧ್ಯವಾದ ಪರಿಸ್ಥಿತಿ ಇದೆ. ಏನು ಮಾಡೋದು ಹೇಳಿ ಎನ್ನುತ್ತಾಳೆ ಮಗು ತಾಯಿ ಅನಿತಾ.

ವಾಸದ ಮನೆಯೂ ಬಿರುಕು

ಅಂಗವೈಕಲ್ಯತೆಯಿAದ ಕೂಡಿದ ಈ ಬಾಲಕಿ ಇರುವ ವಾಸದ ಮನೆ ಸರಿಯಿಲ್ಲ. ಬಿರುಕು ಬಿಟ್ಟ ಗೋಡೆಗಳು, ಗೆದ್ದಲು ತಿಂದು ಹಾಳಾಗಿರುವ ಕಿಟಕಿ ಬಾಗಿಲುಗಳು, ಮಳೆಗೆ ಸೋರುವ ಸೂರು ಹೀಗೆ ಒಂದೆರಡು ಸಮಸ್ಯೆಯಲ್ಲ. ಈ ಬಡ ಕೂಲಿ ಕಾರ್ಮಿಕ ಕುಟುಂಬ ಸಮಸ್ಯೆಗಳನ್ನೇ ತಲೆಯ ಮೇಲೆ ಹೊತ್ತು ಜೀವಿಸುತ್ತಿದೆ.

ಹಾಗಿದ್ದರೂ ಕೂಡ ಗಿರಿಜನ ಅಭಿವೃದ್ಧಿ ಅಧಿಕಾರಿಗಳು, ಸಮಾಜ ಕಲ್ಯಾಣ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಧಾವಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪೋಷಕರ ಆರೋಪ.

ಅಕ್ಷರ ಕಲಿಕೆಯೂ ಇಲ್ಲ

ದೇಹದ ಎಡ ಪಾರ್ಶ್ವ ಊನವಾಗಿದ್ದರೂ ಕೂಡ ಮಾತನಾಡಬಲ್ಲ ಈ ಮಗುವಿಗೆ ಅಕ್ಷರ ಕಲಿಕೆ ಗಗನಕುಸುಮವಾಗಿದೆ. ಮಗುವಿಗೆ ಅಕ್ಷರ ಹೇಳಿಕೊಡಲು ಹೆತ್ತವರೇ ಅಕ್ಷರ ಕಲಿತಿಲ್ಲ. ಎರಡು ತಿಂಗಳಿಗೊಮ್ಮೆ ಸಮೀಪದ ಶಾಲಾ ಶಿಕ್ಷಕರು ಬರೆದದ್ದನ್ನು ತಂದು ಕೊಟ್ಟು ಹೋಗುತ್ತಾರೆ. ಇನ್ನು ಮಗು ಅದನ್ನು ಹೇಗೆ ಓದುತ್ತೋ ಏನೋ ಎನ್ನುತ್ತಾರೆ ತಾತ ವಸಂತ.

ಬೆಳಗದ ಸೋಲಾರ್ ದೀಪ : ಈ ಮಗು ವಾಸವಿರುವ ಮನೆಯ ಬಳಿ ಕಳೆದ ನಾಲ್ಕು ವರ್ಷಗಳ ಹಿಂದೆ ಸೋಲಾರ್‌ದೀಪವೊಂದನ್ನು ಐಗೂರು ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಲಾಗಿತ್ತು. ಆದರೆ ಆರಂಭದ ಒಂದೆರಡು ವರುಷಗಳು ಬೆಳಕು ನೀಡಿದ ಸೋಲಾರ್ ದೀಪ ಇದೀಗ ಕಳೆದ ಎರಡು ವರ್ಷಗಳಿಂದ ದುರಸ್ತಿಗೀಡಾಗಿದೆ ಎಂದು ಅನಿತಾ ಹೇಳುತ್ತಾರೆ.ಮಗುವಿನ ಅಸಹಾಯಕ ಸ್ಥಿತಿ ಕಂಡ ಕುಶಾಲನಗರ ರೋಟರಿ ಸಂಸ್ಥೆ ಕಳೆದ ವರ್ಷ ಮಗು ಆಟವಾಡಲು ವ್ಹೀಲ್ ಚೇರ್ ವೊಂದನ್ನು ಉದಾರವಾಗಿ ಕೊಟ್ಟಿತ್ತು. ಅದನ್ನು ಹೊರತು ಪಡಿಸಿ ಜಿಲ್ಲಾಡಳಿತದಿಂದಾಗಲೀ ತಾಲೂಕು ಆಡಳಿತದಿಂದಾಗಲೀ ಅಥವಾ ಯಾವುದೇ ಚುನಾಯಿತ ಜನಪ್ರತಿನಿಧಿ ಗಳಿಂದಾಗಲೀ ಚಿಕ್ಕಾಸು ಸಹಾಯ ಸಿಕ್ಕಿಲ್ಲ ಎನ್ನುತ್ತಾರೆ ಪೋಷಕರು.

ಇನ್ನಾದರೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಅಥವಾ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಪಂದಿಸುವ ಮೂಲಕ ಸರ್ಕಾರದಿಂದ ಮಗುವಿಗೆ ದೊರಕುವ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. - ಕೆ.ಎಸ್. ಮೂರ್ತಿ