ಮಡಿಕೇರಿ, ಡಿ. ೧೭: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ೫೬ನೇ ವರ್ಷದ ಮಹಾಸಭೆ ತಾ.೨೦ ರಂದು ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ ದೇವಯ್ಯ ಅವರು ತಿಳಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು ೯,೦೬೬ ಸದಸ್ಯರಿದ್ದಾರೆ. ಈ ಸಾಲಿನಲ್ಲಿ ಸಂಘದ ಮಡಿಕೇರಿ ಮುಖ್ಯ ಶಾಖೆಯಲ್ಲಿ ರೂ.೪೪,೨೭,೧೦೨ ನಷ್ಟವಾಗಿದೆ. ಹೆಬ್ಬಾಲೆ ಶಾಖೆಯಲ್ಲಿ ರೂ.೧೬,೭೯೩ ನಷ್ಟವಾದರೆ, ಹುಣಸೂರು ಶಾಖೆಯಲ್ಲಿ ರೂ.೫೫,೫೦,೩೪೮ ಲಾಭವಾಗಿದ್ದು ಸಂಘಕ್ಕೆ ಪ್ರಸ್ತುತ ವರ್ಷ ಸಮಗ್ರವಾಗಿ ರೂ.೧೧,೦೬,೪೫೩ ಲಾಭವಾಗಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮೂಲಕ ಸಂಘವು ರೂ೧.೯ ಕೋಟಿ ಸಾಲ ಪಡೆದುಕೊಂಡಿದ್ದು, ಬಡ್ಡಿ ಸೇರಿ ಒಟ್ಟು ರೂ.೩ ಕೋಟಿಯಷ್ಟು ಪಾವತಿಸಬೇಕಾಗಿದ್ದು, ಇದರಲ್ಲಿ ರೂ.೧.೯೯ ಕೋಟಿಯಷ್ಟು ಪಾವತಿಸಲು ಬಾಕಿ ಇದೆ ಎಂದು ತಿಳಿಸಿದರು.

ಸಂಘದ ವತಿಯಿಂದ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಕಾಫಿ ಕೃಪಾ ಕಟ್ಟಡಕ್ಕೆ ರೂ.೯.೫ ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ ಹಾಕಿಸಲಾಗಿದೆ. ಸಂಘವು ವೀರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಹೊಂದಿರುವ ೧೦ ಸೆಂಟು ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶ ಹೊಂದಿದೆ ಎಂದರು. ಹೆಬ್ಬಾಲೆ ಹಾಗೂ ಹುಣಸೂರಿನಲ್ಲಿಯೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂಬುದಾಗಿ ಮಾಹಿತಿ ಇತ್ತರು.