ಮಡಿಕೇರಿ, ಡಿ. ೧೭: ರಾಜ್ಯದ ವಿವಿಧ ನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡೇಟಾ ಆಪರೇಟರ್ ಹಾಗೂ ಯು.ಜಿ.ಡಿ ಕಾರ್ಮಿಕರನ್ನು ಗುತ್ತಿಗೆ ಪದ್ಧತಿ ಬದಲು ನೇರವೇತನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ತಾ.೨೨ ರಂದು ಧರಣಿ ನಡೆಸಲಾಗುವುದು ಎಂದು ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ ನಾಗಣ್ಣಗೌಡ ಅವರು ತಿಳಿಸಿದರು.
ಇಂದು ನಗರದ ಪತ್ರಕಾ ಭನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೧೭ ರಲ್ಲಿ ಅಂದಿನ ಸರಕಾರ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿಯಲ್ಲಿ ನೇರವೇತನಕ್ಕೆ ಒಳಪಡಿಸಿದೆ. ಇದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡೇಟಾ ಆಪರೇಟರ್ ಹಾಗೂ ಯು.ಜಿ.ಡಿ ಕಾರ್ಮಿಕರನ್ನೂ ನೇರವೇತನಕ್ಕೆ ಸೇರಿಸಬೇಕೆಂದು ಧರಣಿಯಲ್ಲಿ ಆಗ್ರಹಿಸಲಾಗುವುದೆಂದರು. ಸೆ.೨೧ ರಂದು ಬೆಂಗಳೂರಿನಲ್ಲಿ ಸಂಘದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು. ಯಾವುದೇ ರೀತಿಯ ಸ್ಪಂದನ ದೊರಕದೆ ಇರುವ ಕಾರಣ ಇದೀಗ ತಾ.೨೨ ರಂದು ಬೆಳಗಾವಿಯಲ್ಲಿ ಧರಣಿ ಹಮ್ಮಿಕೊಂಡು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರಿಗೆ ವಿವಿಧ ಏಜನ್ಸಿಗಳಿಂದ ಸಂಭಾವನೆ ರವಾನೆಯಾಗಬೇಕು. ಆದರೆ ವಿವಿಧ ಕಾರಣಗಳನ್ನು ನೀಡಿ ಇಂತಹ ಏಜನ್ಸಿಗಳು ಹಣ ಪಾವತಿಸದೇ ನೌಕರರನ್ನು ಸತಾಯಿಸುತ್ತಿವೆ ಎಂದು ಆರೋಪಿಸಿರುವ ಅವರು, ಈ ಸಮಸ್ಯೆ ತಡೆಗಟ್ಟಲು ನೇರ ವೇತನ ಜಾರಿಗೊಳಿಸಿ ಸರಕಾರದಿಂದಲೇ ಹಣ ಸಿಗುವಂತೆ ಆಗಬೇಕಿದೆ. ಈ ಮೂಲಕ ಗುತ್ತಿಗೆ ಏಜನ್ಸಿಗಳಿಗೆ ವ್ಯಯವಾಗುವ ಶೇ.೫ ರಷ್ಟು ಸೇವಾ ಶುಲ್ಕದೊಂದಿಗೆ ಜಿ.ಎಸ್.ಟಿಗೆ ವ್ಯಯವಾಗುವ ಹಣವೂ ಉಳಿತಾಯವಾಗಿ ನೌಕರರಿಗೆ ಪರಿಪೂರ್ಣ ಸಂಭಾವನೆ ದೊರಕುತ್ತದೆ. ಗುತ್ತಿಗೆ ಆಧಾರದಲ್ಲಿನ ನೌಕರರ ಕೆಲಸದ ಅಭದ್ರತೆಯ ಸಮಸ್ಯೆಯೂ ಪರಿಹಾರವಾಗಲಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಸುಮಾರು ೨೦೦ ರಷ್ಟು ಹೊರಗುತ್ತಿಗೆ ನೌಕರರಿದ್ದಾರೆ ಹಾಗೂ ರಾಜ್ಯದಲ್ಲಿ ಸುಮಾರು ೧,೫೦೦ ರಷ್ಟು ನೌಕರರಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ, ಉಪಾಧ್ಯಕ್ಷ ಬೋಪಣ್ಣ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಕುಟ್ಟಪ್ಪ ಹಾಗೂ ಜಿಲ್ಲಾ ಖಜಾಂಚಿ ಖಬೀರ್ ಅವರುಗಳು ಉಪಸ್ಥಿತರಿದ್ದರು.