ಮಡಿಕೇರಿ/ಕಣಿವೆ, ಡಿ. ೧೬: ಆನೆ-ಮನೆ ಫೌಂಡೇಷನ್‌ನ ಸಹ ಸಂಸ್ಥಾಪಕರಾದ ಪ್ರಜ್ಞಾ ಚೌಟ ಅವರ ೮ ಸಾಕಾನೆಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು ಬಂಡೀಪುರದ ರಾಮಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ. ೨,೦೦೦ ಇಸವಿಯಿಂದ ದುಬಾರೆ ಅರಣ್ಯ ವ್ಯಾಪ್ತಿಯ ಕ್ಯಾಂಪ್ ಒಂದರಲ್ಲಿ ಪ್ರಜ್ಞಾ ಅವರು ಆನೆಗಳನ್ನು ಸಲಹುತ್ತಿದ್ದರು. ಆನೆಗಳ ನಡವಳಿಕೆಗಳ ಸಂಬAಧ ಫೌಂಡೇಶನ್ ವತಿಯಿಂದ ಅಧ್ಯಯನ ಮಾಡುವ ಉದ್ದೇಶದಿಂದ ಆನೆಗಳನ್ನು ಆರೈಕೆ ಮಾಡಲಾಗುತ್ತಿತ್ತು.

ಆದರೆ, ಈ ವ್ಯಾಪ್ತಿಯ ಬಹಳಷ್ಟು ಬೆಳೆಗಾರರು ಸೇರಿದಂತೆ ರೈತರು, ಪ್ರಜ್ಞಾ ಅವರಿಗೆ ಸೇರಿದ ಆನೆಗಳು ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರು ವುದಾಗಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಆಗಸ್ಟ್ನಲ್ಲಿ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಆನೆಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿದರು.

ಆದೇಶದ ಹಿನ್ನೆಲೆ ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಒಂದು ಮರಿಯಾನೆ ಸೇರಿದಂತೆ ಒಟ್ಟು ೮ ಆನೆಗಳನ್ನು ಲಾರಿಗಳ ಮೂಲಕ ಬಂಡೀಪುರದ ರಾಮಪುರ ಶಿಬಿರಕ್ಕೆ ಸಾಗಿಸಲಾಗಿದೆ. ಈ ವೇಳೆ ಡಿ.ಎಫ್.ಒ ಪೂವಯ್ಯ, ಎ.ಸಿ.ಎಫ್ ನೆಹರು, ಆರ್.ಎಫ್.ಒ ಅನನ್ಯಕುಮಾರ್, ದುಬಾರೆ ಸಾಕಾನೆ ಶಿಬಿರದ ಅರಣ್ಯಾಧಿಕಾರಿ ಕೆ.ಪಿ ರಂಜನ್, ಅನಿಲ್ ಡಿಸೋಜ, ಮಾವುತರಾದ ಜೆ.ಕೆ ಡೋಬಿ, ಜಿ.ಆರ್ ಚಿಣ್ಣಪ್ಪ, ಅಣ್ಣಯ್ಯ, ಕಾವಾಡಿ ನಯಾಜ್ ಪಾಷಾ ಇದ್ದರು.

೪೩ ವರ್ಷ ಪ್ರಾಯದ ಹೀರಣ್ಯ ಹಾಗೂ ಅದರ ಮೂರು ತಿಂಗಳ ಹಸುಳೆ, ೩೪ ರ ಮಾಲಾದೇವಿ, ೮ ವರ್ಷದ ಪೂಜಾ, ೪ ರ ಪ್ರಾಯದ ಕಮಲಿ, ೨ ವರ್ಷದ ಕನ್ನಿಕ, ಗಜ(೭) ಹಾಗೂ ಧರ್ಮ(೧೨) ಎಂಬ ಗಂಡಾನೆಗಳನ್ನು ಸಾಗಿಸಲಾಗಿದೆ. ರಾಮಪುರ ಆನೆ ಶಿಬಿರದಲ್ಲಿ ಈಗಾಗಲೇ ೧೩ ಆನೆಗಳು ಇವೆ. ಈ ಗುಂಪಿಗೆ ಮತ್ತೆ ೮ ಆನೆಗಳು ಸೇರ್ಪಡೆಯಾದಂತಾಗಿದೆ.