ಶನಿವಾರಸಂತೆ, ಡಿ. ೧೫: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರೂ. ೧೬,೪೬,೩೭೫ ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್ ಹೇಳಿದರು.

ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ ಎಲ್ಲಾ ಗೊಬ್ಬರ ಕಂಪೆನಿಗಳ ಡೀಲರ್ ಶಿಪ್ ಪಡೆದುಕೊಂಡಿದ್ದು, ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣ ಗೊಳಿಸಲಾಗಿದೆ. ಸಂಘದ ಕಚೇರಿ ಹಿಂಭಾಗ ವ್ಯವಸ್ಥಿತವಾದ ಹಾಗೂ ಸುಸಜ್ಜಿತವಾದ ೧೫೦ ಮೆಟ್ರಿಕ್ ಟನ್ ಗೋದಾಮು ರೂ. ೭.೯ ಲಕ್ಷದಲ್ಲಿ ನಿರ್ಮಾಣಗೊಂಡಿದ್ದು, ಗೊಬ್ಬರ ದಾಸ್ತಾನು ಮಾಡಿಕೊಂಡು ಕಾಲಾನುಕಾಲಕ್ಕೆ ವಿತರಣೆ ಮಾಡಲಾಗುತ್ತಿದೆ. ಸಂಘವು ಅತ್ಯುತ್ತಮವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ೨೦೨೦-೨೧ನೇ ಸಾಲಿನಲ್ಲಿ ‘ಎ’ ತರಗತಿಗೆ ಸಂಘದ ಆಡಿಟ್ ವರ್ಗೀಕರಣವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರವೇ ಕಾರಣ ಎಂದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಸಂಘದ ಸದಸ್ಯರಾದ ಎಸ್.ಎಂ. ಉಮಾಶಂಕರ್, ಎ.ಡಿ. ದೊಡ್ಡಪ್ಪ, ಎಂ. ಮೋಹನ್, ಕೆ.ವಿ. ಮಂಜುನಾಥ್, ಮಹಮ್ಮದ್ ಪಾಶ ಇತರರು ಚರ್ಚೆಯಲ್ಲಿ ಪಾಲ್ಗೊಂಡು ಸಂಘದ ಅಭಿವೃದ್ಧಿಗೆ ಸಲಹೆ ನೀಡಿದರು. ಸಂಘದ ಉಪಾಧ್ಯಕ್ಷ ಬಿ.ಎಸ್. ಮಂಜುನಾಥ್, ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಡಿ.ಬಿ. ಧರ್ಮಪ್ಪ, ಹೆಚ್.ವಿ. ಮಹಾಂತಪ್ಪ, ಗಿರಿಜಾ ಕರುಣಾಕರ್, ದೇವಾಂಬಿಕಾ ಮಹೇಶ್, ಎಚ್.ಸಿ. ದೀಪಕ್, ಜಿ.ಬಿ. ಪರಮೇಶ್, ಎಚ್.ಎನ್. ಕುಮಾರ್ ನಾಯಕ, ಎಸ್.ಜೆ. ರವಿಕುಮಾರ್, ರಾಮಯ್ಯ, ಸರಕಾರದ ನಾಮ ನಿರ್ದೇಶಕ ಎಸ್.ಎಸ್. ಸಾಗರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್, ಸಿಬ್ಬಂದಿ ಬಿ.ಆರ್. ಹರೀಶ್, ಉಪಸ್ಥಿತರಿದ್ದರು. ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್ ಸ್ವಾಗತಿಸಿ, ಡಿ.ಬಿ. ಧರ್ಮಪ್ಪ ವಂದಿಸಿದರು.