ಗೋಣಿಕೊಪ್ಪಲು. ಡಿ.೧೫: ದ.ಕೊಡಗಿನ ಶ್ರೀಮಂಗಲ ವ್ಯಾಪ್ತಿಯ, ಬಿರುಗ, ಕುರ್ಚಿ ಹಾಗೂ ಇತರ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ರೈತರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಕಾಫಿ ಕೊಯ್ಲಿಗೆ ತೊಂದರೆ ಎದುರಾಗಿದೆ.

ಕಾಫಿ ಹಣ್ಣು ಇನ್ನೇನು ಕೀಳಬೇಕು ಎನ್ನುವಷ್ಟರಲ್ಲಿ ರೈತ ಹಾಗೂ ಕಾರ್ಮಿಕ ಕಾಡಾನೆಗಳ ಉಪಟಳದಿಂದ ತಮ್ಮ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಾಣ ಭಯದಲ್ಲಿ ತೋಟವನ್ನು ಪ್ರವೇಶಿಸುವ ಅನಿವಾರ್ಯತೆ ಎದುರಾಗಿದೆ. ಕಾಡಾನೆಗಳು ತೋಟದಲ್ಲಿ ಬೀಡು ಬಿಟ್ಟಿರುವುದರಿಂದ ಹಣ್ಣಾಗಿರುವ ಕಾಫಿ ಫಸಲುಗಳು ನೆಲಕ್ಕೆ ಉದುರುತ್ತಿವೆ.

ಇತ್ತ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದಲ್ಲಿ ಹಾಗೂ ಕಳತ್ಮಾಡುವಿನಲ್ಲಿಯೂ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ರೈತ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಈಗಾಗಲೇ ಕಾಫಿ ಫಸಲು ಇಲ್ಲದೇ ಕಷ್ಟದಲ್ಲಿ ಸಿಲುಕಿದ್ದಾನೆ. ಆದರೆ ವನ್ಯಪ್ರಾಣಿಗಳ ಉಪಟಳದಿಂದ ರೈತ ನಿಗೆ ದಿಕ್ಕೇ ತೋಚದಂತಾಗಿದೆ.

ಕಾಡಾನೆಗಳ ಹಿಂಡನ್ನು ಕೂಡಲೇ ಅರಣ್ಯಕ್ಕೆ ಅಟ್ಟುವ ಕೆಲಸ ಅರಣ್ಯ ಇಲಾಖೆಯ ವತಿಯಿಂದ ಮಾಡಬೇಕು, ರೈತರ ಬೆಳೆ ಉಳಿಸಬೇಕು ಎಂದು ಕುರ್ಚಿ ಗ್ರಾಮದ ಅಜ್ಜಮಾಡ ಚಂಗಪ್ಪ ಅರಣ್ಯ ಇಲಾಖೆಯ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ. - ಹೆಚ್.ಕೆ.ಜಗದೀಶ್