ಮಡಿಕೇರಿ, ಡಿ. ೧೩: ಪ್ರತಿಯೊಬ್ಬರೂ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಸೋಲೂರು ಗ್ರಾಮದ ಶ್ರೀ ರೇಣುಕಾಪೀಟ ಮತ್ತು ಶ್ರೀ ನಾರಾಯಣ ಗುರು ಮಠದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನದ ವತಿಯಿಂದ ಆರ್ಯ ಈಡಿಗ ಸಮಾಜ ಬಾಂಧವರ ಸಮಾಲೋಚನಾ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸರಳತೆಯ ಜೀವನವನ್ನು ನಡೆಸುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಮತ್ತು ಮೌಢ್ಯಗಳನ್ನು ದೂರ ಮಾಡುವಂತೆ ಸಲಹೆ ನೀಡಿದರು.

೨೦೨೨ ಫೆಬ್ರವರಿ ೨ ರಂದು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ನಾರಾಯಣ ಗುರುಮಠದಲ್ಲಿ ಶ್ರೀ ರೇಣುಕಾ ಪೀಠಕ್ಕೆ ನೂತನ ಗುರುಗಳ ಪೀಠಾರೋಹಣ ನಡೆಯಲಿದೆ ಎಂದರು.

ಅಬಕಾರಿ ಇಲಾಖೆಯ ಆಯುಕ್ತ ಜಗದೀಶ್ ನಾಯಕ್ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗುರುಗಳು ಅಜ್ಞಾನದ ನಡುವೆ ಜ್ಞಾನ ಇದ್ದಂತೆ. ಪ್ರತಿ ಸಮಾಜಕ್ಕೆ ಗುರುಗಳ ಅವಶ್ಯಕತೆ ಇದ್ದು, ಅಂಧಕಾರವನ್ನು ಓಡಿಸಲು, ಮಾನಸಿಕವಾಗಿ ನೊಂದಾಗ ಗುರುಗಳ ಅವಶ್ಯಕತೆ ಇದೆ ಎಂದರು.

ಹಿAದುಳಿದ ವರ್ಗಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಲವು ಸಂಘಟನೆಗಳಿದ್ದು, ಹಕ್ಕಿಗಾಗಿ ಹೋರಾಟ ನಡೆಸುವಾಗ ಎಲ್ಲರೂ ಒಂದೇ ವೇದಿಕೆಯಡಿ ಕಾರ್ಯನಿರ್ವ ಹಿಸಬೇಕು. ಸಮುದಾಯದಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಎಸ್‌ಎನ್‌ಡಿಪಿ ಮಾಜಿ ಅಧ್ಯಕ್ಷ ಕೆ.ಎನ್. ವಾಸು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎನ್‌ಡಿಪಿ ಅಧ್ಯಕ್ಷ ವಿ.ಕೆ. ಲೋಕೇಶ್, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ವೈ. ಆನಂದ, ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಆರ್ಯ ಈಡಿಗ ಸಮಾಜದ ಮುಖಂಡ ಎಸ್.ಕೆ. ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.