ಮಡಿಕೇರಿ, ಡಿ. ೧೩: ಸುಂಟಿಕೊಪ್ಪ ಪ್ರಾಥಮಿಕ, ಪ್ರೌಢ ಹಾಗೂ, ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿಕೊಂಡಿರುವ ಚಡ್ಡಿದೋಸ್ತ್ ಬಳಗದ ವತಿಯಿಂದ ೩ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಗುಡ್ಡೆಹೊಸೂರು ಐಎನ್ ಎಸ್ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿಕ್ಷಕರ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅತಿಥೇಯ ಚಡ್ಡಿದೋಸ್ತ್ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.

ಸೌಹಾರ್ದ ಪಂದ್ಯಾಟದಲ್ಲಿ ಚಡ್ಡಿದೋಸ್ತ್ ಎ ಮತ್ತು ಬಿ, ಪ್ರೆಸ್‌ಕ್ಲಬ್, ಶಿಕ್ಷಕರು, ಮತ್ತು ಕಂದಾಯ ಇಲಾಖೆ ಸೇರಿ ಒಟ್ಟು ೫ ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಚಂಗಪ್ಪ, ತಿಮ್ಮಪ್ಪ, ಪ್ರಸ್ತುತ ೭ನೇ ಹೊಸಕೋಟೆಯಲ್ಲಿ ಮುಖ್ಯಶಿಕ್ಷಕಿಯಾಗಿರುವ ಲೀಲಾವತಿ ಹಾಗೂ ಭಾರತೀಯ ಹ್ಯಾಂಡ್‌ಬಾಲ್ ತಂಡದ ನಾಯಕರಾಗಿರುವ ಯೋಧ ಗ್ರೀನೆಡ್ಜ್ ಡಿಕೊನ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಚಡ್ಡಿದೋಸ್ತ್ ಬಳಗದ ಚಂಗಪ್ಪ ಮತ್ತು ಅರುಣ್ ರೈ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ನವೀನ್, ಸ್ಥಾಪಕ ಮೋಹನ್ ಮತ್ತು ಬಳಗದ ಎಲ್ಲಾ ಸ್ನೇಹಿತರು ಭಾಗವಹಿಸಿದ್ದರು.