ವೀರಾಜಪೇಟೆ, ಡಿ. ೧೩: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲಿ ಭಾನುವಾರ ರಾತ್ರಿ ಕೊನೆಯುಸಿರೆಳೆದ ಚತುರ್ಭಾಷಾ ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಅವರ ಮೃತದೇಹವನ್ನು ಅವರ ಸ್ವ ಇಚ್ಚೆಯಂತೆ ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. ಅವರ ಸ್ವಗೃಹ ಕುಟ್ಟಂದಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಸಾರ್ವಜನಿಕರ ದರ್ಶನದ ಬಳಿಕ ದೇಹವನ್ನು ಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಡಲಾಯಿತು.
ಕೊಡವ, ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆ ಸೇರಿದಂತೆ ಚತುರ್ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ನಿವೃತ್ತ ಶಿಕ್ಷಕಿ ಮುಲ್ಲೇಂಗಡ ಬೇಬಿ ಚೋಂದಮ್ಮ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ, ತೂಕ್ ಬೊಳಕ್ ಕೊಡವ ವಾರ ಪತ್ರಿಕೆಯ ಉಪ ಸಂಪಾದಕಿಯಾಗಿಯೂ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ನಿರ್ದೇಶಕಿ ಯಾಗಿಯೂ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸದಸ್ಯೆಯಾಗಿಯೂ ಸೇವೆ ಸಲ್ಲಿಸುವುದರೊಂದಿಗೆ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.