ಕಣಿವೆ, ಡಿ. ೧೩: ಇಲ್ಲಿಗೆ ಸಮೀಪದ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಎಡುಂಡೆ ಗ್ರಾಮಸ್ಥರು ಮನೆ ಮುಂದಿನ ಸಾರ್ವಜನಿಕ ರಸ್ತೆಯನ್ನು ಸರಿಪಡಿಸಬೇಕೆಂದು ಸಾಮೂಹಿಕವಾಗಿ ಆಗ್ರಹಿಸಿದರು.
ಗ್ರಾಮದ ನಿವೃತ್ತ ಶಿಕ್ಷಕರೂ ಆದ ಗ್ರಾಮದ ಹಿರಿಯ ನಿವಾಸಿ ಹೊದ್ದೆಟ್ಟಿ ಗುಡ್ಡಪ್ಪ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮ ನಿವಾಸಿಗಳು ಸ್ಥಳೀಯ ಗ್ರಾ.ಪಂ., ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗೋಣಿಮರೂರು ಗ್ರಾಮದಿಂದ ಎಡುಂಡೆ ಗ್ರಾಮದ ಗುಡ್ಡಪ್ಪ ಮಾಸ್ಟರ್ ಮನೆಗಾಗಿ ಗಣಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಡುಂಡೆ ಗ್ರಾಮದಲ್ಲಿ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಂತೂ ಇಲ್ಲಿ ಶಾಲಾ ಮಕ್ಕಳು, ರೈತರು, ಕೂಲಿ ಕಾರ್ಮಿಕರು ಹಾಗು ಸ್ಥಳೀಯರು ನಡೆದಾಡಲು ಸಾಧ್ಯವಾಗದ ಮಟ್ಟಿಗೆ ಹಾಳಾಗಿದೆ. ಈ ಬಗ್ಗೆ ನಾವು ಕಳೆದ ಹತ್ತಾರು ವರ್ಷ ಗಳಿಂದ ಒಂದರ ಮೇಲೊಂದರAತೆ ನೂರಾರು ಮನವಿ ಪತ್ರಗಳನ್ನು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿ ಗಳಿಗೆ ನೀಡುತ್ತಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುಡ್ಡಪ್ಪ ಮಾಸ್ಟರ್ ಬೇಸರ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದ್ದು ಅಲ್ಲಿಗೆ ಪೂಜೆ ಸಲ್ಲಿಸಲು ಕೂಡ ಹೋಗಲಾರದಷ್ಟು ಹಾಳಾಗಿದೆ. ಆದಾಗ್ಯೂ ನಾವುಗಳು ಮನೆ ಮನೆಗಳ ಜನ ಸೇರಿಕೊಂಡು ಗುಂಡಿ ಮುಚ್ಚುವುದು ಕಾಡು ಕಡಿಯುವ ಕೆಲಸ ಮಾಡಿಕೊಂಡಿದ್ದೇವೆ ಎಂದು ಗ್ರಾಮಸ್ಥರಾದ ನಂಗಾರು ಪೊನ್ನಪ್ಪ, ದಂಬೆಕೋಡಿ ಹರೀಶ, ಹಾಲೇರಿ ಶಿವಮೂರ್ತಿ ಮೊದಲಾದವರು ಹೇಳುತ್ತಾರೆ.
ಗ್ರಾಮಸ್ಥರು ಜಮಾಯಿಸಿದ್ದ ಸ್ಥಳಕ್ಕೆ ಧಾವಿಸಿದ ಗಣಗೂರು ಗ್ರಾ.ಪಂ. ಸದಸ್ಯ ಜಿ.ಬಿ. ಸಿದ್ದಲಿಂಗಪ್ಪ ಮಾತನಾಡಿ, ಗುಡ್ಡಪ್ಪ ಮಾಸ್ಟರ್ ಮನೆಗಾಗಿ ಹಾದು ಹೋಗಿರುವ ಒಂದು ಕಿಮೀ ರಸ್ತೆ ಪೂರ್ಣ ಹಾಳಾಗಿದ್ದು ಪಂಚಾಯಿತಿ ಯಿಂದ ಮಣ್ಣು ಹಾಕಿ ಗುಂಡಿ ಮುಚ್ಚಬಹುದಷ್ಟೆ. ಆದರೆ ನಿವಾಸಿಗಳ ಸಮಸ್ಯೆ ನಿವಾರಣೆಗೆ ಇಲ್ಲಿ ಶಾಶ್ವತವಾದ ಕಾಂಕ್ರಿಟ್ ರಸ್ತೆ ಅಥವಾ ಗುಣಮಟ್ಟದ ಡಾಂಬರು ರಸ್ತೆ ಆಗಲೇ ಬೇಕಿದೆ. ಈ ಬಗ್ಗೆ ಶಾಸಕರು ಅಥವಾ ಜಿಲ್ಲಾಧಿಕಾರಿ ಗಳ ಅನುದಾನ ಅಗತ್ಯವಿದೆ. ಒಟ್ಟಾರೆ ಇಲ್ಲಿನ ನಿವಾಸಿಗಳ ಬಹಳ ವರ್ಷಗಳ ಸಮಸ್ಯೆ ಬಗೆಹರಿಯಬೇಕು ಎಂದರು.
ಇಲ್ಲಿ ಮಳೆ ಬಂದಾಗ ಕೆಸರು ತುಂಬಿ ನಿಲ್ಲುವ ಕಚ್ಚಾ ರಸ್ತೆಯಲ್ಲಿ ಮಕ್ಕಳನ್ನು ತಲೆ ಮೇಲೆ ಹೊತ್ತು ಕೊಂಡು ಹೋಗಿ ಮುಖ್ಯ ರಸ್ತೆಗೆ ಬಿಟ್ಟು ಬರುತ್ತಿದ್ದೇವೆ. ಕೂಡಲೇ ಸಂಬAಧ ಪಟ್ಟವರು ಇಲ್ಲಿಗೆ ಬಂದು ನಮ್ಮ ಸಮಸ್ಯೆ ಪರಿಶೀಲಿಸಿ ಸೂಕ್ತ ನ್ಯಾಯ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರಲ್ಲದೆ ಮುಂದಿನ ೧೫ ದಿನದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಮಹಿಳೆಯರಾದ ಕಿರ್ಲಾಯಿ ಜ್ಯೋತಿ, ಹಾಲೇರಿ ವನಜಾಕ್ಷಿ, ಹೊದ್ದೆಟ್ಟಿ ರೋಹಿಣಿ, ದಂಬೆಕೋಡಿ ಜಾನಕಿ, ನವೀನ ಗುಡ್ಡಪ್ಪ, ಕೆ.ಕೆ.ಸುಂದರ, ಜೋಸೆಫ್ ಮೊದಲಾದವರಿದ್ದರು.