ಕೂಡಿಗೆ, ಡಿ. ೧೨: ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಭಿತ್ತಿಪತ್ರ ರಚನೆ ಹಾಗೂ ಚಿತ್ರಕಲೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮತದಾನದ ಮಹತ್ವದ ಕುರಿತು ಮಾತನಾಡಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಮತದಾನ ಮಾಡುವಾಗ ಯಾವುದೇ ಒತ್ತಡಕ್ಕೆ ಒಳಗಾಗದೇ ನಿರ್ಮಲ ಮನಸ್ಸಿನಿಂದ ಮತ ಚಲಾಯಿಸಬೇಕು ಎಂದರು. ಪ್ರತಿಜ್ಞಾ ವಿಧಿ ಬೋಧಿಸಿ ಮತದಾರರ ಸಾಕ್ಷರತಾ ಕ್ಲಬ್ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಶಾಲೆಯ ಸಾಕ್ಷರತಾ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಎಸ್.ಎಂ. ಗೀತಾ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ೧೮ ವರ್ಷ ತುಂಬಿದ ಯುವಕ-ಯುವತಿಯರನ್ನು ಭೇಟಿಮಾಡಿ ಮತದಾರರ ನೋಂದಣಿ ಆ್ಯಪ್ ಮೂಲಕ ನೋಂದಣಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಶಿಕ್ಷಕರಾದ ಜಿ. ಗೋಪಾಲಕೃಷ್ಣ, ಡಿ. ರಮೇಶ್, ದಯಾನಂದ ಪ್ರಕಾಶ್, ಬಿ.ಡಿ. ರಮ್ಯ, ಅನಿತಾ, ಅನ್ಸಿಲಾ ರೇಖಾ, ಬಿ.ಎಡ್. ಪ್ರಶಿಕ್ಷಣಾರ್ಥಿ ಮೋಕ್ಷಿತ್, ಅಭಿಲಾಷ್, ಅಜಿತ ಇದ್ದರು. ಗ್ರಾಮಸ್ಥರಾದ ಕೆ.ಎಸ್. ರಾಜಾಚಾರಿ ಇತರರು ಇದ್ದರು.