ಸೋಮವಾರಪೇಟೆ, ಡಿ. ೧೩: ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಕೊಡ್ಲಿಪೇಟೆ-ಸೋಮವಾರಪೇಟೆ-ಮಡಿಕೇರಿ ಸಂಪರ್ಕದ ಹಾಲೇರಿವರೆಗಿನ ರಸ್ತೆಯ ಗುಂಡಿಗಳನ್ನು ಮುಚ್ಚಲು ೩೮ ಲಕ್ಷ ಮಂಜೂರಾಗಿದ್ದು, ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ.
ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ-೨೭ರ ಕೊಡ್ಲಿಪೇಟೆಯಿಂದ ಹಾಲೇರಿವರೆಗಿನ ೫೯ ಕಿ.ಮೀ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದು, ಚರಂಡಿ ದುರಸ್ತಿ, ವಾಟರ್ ಕಟ್ಗಳ ನಿರ್ಮಾಣ, ಕಾಡು ತೆರವು ಕಾಮಗಾರಿಗಳನ್ನು ನಿರ್ವಹಿಸಲು ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳ ವಾರ್ಷಿಕ ನಿರ್ವಹಣೆ ಯೋಜನೆಯಡಿ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಕೊಡ್ಲಿಪೇಟೆ-ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣಗೊಂಡು ದಶಕಗಳೇ ಕಳೆದಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಹೆದ್ದಾರಿಯನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಮಾರ್ಪಡಿಸಿ ಅಭಿವೃದ್ಧಿ ಪಡಿಸಲಾಗುವುದು ಎಂಬ ಭರವಸೆಯ ಮಾತುಗಳು ಕೇಳಿ ಬರುತ್ತಿದ್ದವೇ ವಿನಃ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಹೀಗಾಗಿ ರಾಜ್ಯ ಹೆದ್ದಾರಿ ಯಾಗಿಯೇ ಉಳಿದುಕೊಂಡಿರುವ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ದುರಸ್ತಿ ಕಾರ್ಯ ಕೈಗೊಂಡಿದ್ದು, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಶನಿವಾರಸಂತೆಯ ಗುಡುಗಳಲೆ ಯಿಂದ ಒಡೆಯನಪುರದವರೆಗಿನ ೪ ಕಿ.ಮೀ. ರಸ್ತೆಯನ್ನು ರೂ. ೧.೭೦ ಕೋಟಿ ವೆಚ್ಚದಲ್ಲಿ, ಮಳೆಹಾನಿ ಪರಿಹಾರ ನಿಧಿಯಡಿ ಈಗಾಗಲೇ ಮರು ನಿರ್ಮಾಣ ಮಾಡಲಾಗಿದೆ. ಉಳಿದ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.
ಈ ನಡುವೆ ಕೊಡ್ಲಿಪೇಟೆಯ ಶಾಂತಪುರದ ಬಳಿಯಲ್ಲಿ ಕಾಮಗಾರಿ ಕಳಪೆಯಾಗುತ್ತಿರುವ ಬಗ್ಗೆ ಕೆಲವರು ಆರೋಪಿಸಿದ್ದು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ಕುಮಾರ್ ಅವರು, ಪರಿಶೀಲನೆ ನಡೆಸಿದ್ದಾರೆ.
ಕಳೆದ ತಾ. ೨ ರಂದು ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭಾರೀ ಮಳೆ ಬಂದಿದ್ದು, ಈ ಸಂದರ್ಭ ಗುಂಡಿಗಳಿಗೆ ಡಾಂಬರು ಹಾಕಲು ಸಾಧ್ಯವಾಗಿಲ್ಲ. ಇದನ್ನೇ ಕಳಪೆ ಕಾಮಗಾರಿ ಎಂದು ಕೆಲವರು ವೃಥಾ ಆರೋಪಿಸಿದ್ದಾರೆ. ತಾನು ಕಾಮಗಾರಿಯನ್ನು ಖುದ್ದು ಪರಿಶೀಲನೆ ನಡೆಸಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ಮೋಹನ್ಕುಮಾರ್ ಹೇಳಿದ್ದಾರೆ.
ಇದರೊಂದಿಗೆ ರಸ್ತೆ ಕಾಮಗಾರಿ ನಡೆಸಲು ಸರ್ಕಾರದಿಂದ ೧೫ ಕೋಟಿ ಬಿಡುಗಡೆಯಾಗಿದೆ ಎಂದು ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ವಾಸ್ತವಿಕವಾಗಿ ಲೋಕೋಪಯೋಗಿ ಇಲಾಖೆಯ ವಾರ್ಷಿಕ ನಿರ್ವಹಣೆ ಯೋಜನೆಯಡಿ ೩೮ ಲಕ್ಷಕ್ಕೆ ಆನ್ಲೈನ್ ಟೆಂಡರ್ ಆಗಿದೆ. ಈ ಅನುದಾನದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ಅಭಿಯಂತರರು ತಿಳಿಸಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಗೆ ಇಲಾಖೆಯಿಂದಲೇ ಅಭಿಯಂತರರನ್ನು ನೇಮಿಸಲಾಗಿದೆ ಎಂದು ಮೋಹನ್ಕುಮಾರ್ ಮಾಹಿತಿ ನೀಡಿದ್ದಾರೆ.