ಕೂಡಿಗೆ, ಡಿ.೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಹಸುಗಳಿಗೆ ಕಾಲು ಬಾಯಿ ಜ್ವರ ಮತ್ತು ಗಂಟಲು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಪಶುಪಾಲನಾ ಇಲಾಖೆ ವತಿಯಿಂದ ಈ ವ್ಯಾಪ್ತಿಯ ಎಲ್ಲಾ ರೈತರು ಸಾಕಿದ ಹಸು ಮತ್ತು ಕರುಗಳಿಗೆ ಚಿಕಿತ್ಸೆ ಮೂಲಕ ಚುಚ್ಚುಮದ್ದು ಹಾಕಲಾಗುತ್ತಿದೆ.
ಕಳೆದ ೧೫ ದಿನಗಳಿಂದ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಸಣ್ಣ ಕರುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂಟುರೋಗ ಅದ ಕಾರಣದಿಂದಾಗಿ ಇಲಾಖೆಯ ವತಿಯಿಂದ ಗ್ರಾಮದ ಹಸುಗಳಿಗೆ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಇದರ ಮೂಲಕ ಹಸುಗಳು ಚೇತರಿಕೆ ಕಾಣಲು ಅನುಕೂಲವಾಗುತ್ತಿದೆ.
ಕೂಡಿಗೆ ವ್ಯಾಪ್ತಿಯ ಕಾಲು ಬಾಯಿ ಜ್ವರದ ಮಾಹಿತಿಯನ್ನು ತಿಳಿದು ಸ್ಥಳಕ್ಕೆ ಭೇಟಿ ನೀಡಿ ತಾಲೂಕು ಪಶುಪಾಲನಾ ಇಲಾಖೆಯ ಅಧಿಕಾರಿ ಡಾ. ಎಸ್.ವಿ. ಬಾದಾಮಿ ಮತ್ತು ಅವರ ತಂಡ ಚುಚ್ಚುಮದ್ದು ನೀಡುವಲ್ಲಿ ನಿರತರಾಗಿದ್ದಾರೆ. ಡಾ. ಎಸ್. ಬಾದಾಮಿ ಮಾತಾಡುತ್ತಾ ರೈತರ ಬೇಡಿಕೆಗೆ ಅನುಗುಣವಾಗಿ ಎಲ್ಲಾ ಹಸು ಮತ್ತು ಕರುಗಳಿಗೆ ಚುಚ್ಚುಮದ್ದು ಹಾಕುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.