ಗೋಣಿಕೊಪ್ಪಲು, ಡಿ. ೧೨: ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು, ಅಕ್ರಮ ಮರಳು ಹಾಗೂ ತೆಪ್ಪವನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ ಆರೋಪಿಗಳು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.
ದ.ಕೊಡಗಿನ ಕಿರುಗೂರು ಸಮೀಪದ ನಲ್ಲೂರು ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಡಿಕೇರಿಯ ಅಪರಾಧ ಪತ್ತೆ ದಳದ ಅಧಿಕಾರಿ ಮೇದಪ್ಪ ಹಾಗೂ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಆರೋಪಿಗಳು ಅಧಿಕಾರಿಗಳನ್ನು ಆಗಮಿಸುತ್ತಿರುವುದನ್ನು ಮನಗಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಅಧಿಕಾರಿಗಳು ೬ ಲೋಡ್ ಮರಳು ಹಾಗೂ ತೆಪ್ಪವನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜಿಲ್ಲೆಯಲ್ಲಿ ಚುನಾವಣೆ ಸಂದರ್ಭ ನೀತಿ ಸಂಹಿತೆ ಜಾರಿಯಲ್ಲಿರುವುದನ್ನು ಮನಗಂಡ ಮರಳು ವ್ಯಾಪಾರಿಗಳು ಪೊಲೀಸರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಮರಳು ತೆಗೆಯಲು ಆರಂಭಿಸಿದ್ದರು. ಆದರೆ ಈ ಸುದ್ದಿ ಮಡಿಕೇರಿಯ ಅಪರಾಧ ಪತ್ತೆ ದಳದ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆಯೇ ದಿಢೀರ್ ದಾಳಿ ನಡೆಸಿದ್ದರು. ಹಲವು ಲಾರಿಗಳಷÀÄ್ಟ ಮರಳು ಶೇಖರಣೆ ಮಾಡಿರುವುದಾಗಿ ತಿಳಿದು ಬಂದಿದೆ.
-ಹೆಚ್.ಕೆ. ಜಗದೀಶ್