ಮಡಿಕೇರಿ, ಡಿ. ೧೧: ‘ಎಂ.ಎಲ್.ಸಿ. ಫೈಟ್ ಇದೀಗ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಗೆಲುವು-ಸೋಲಿನ ಲೆಕ್ಕಾಚಾರ ಮಾತ್ರ. ಯಾರು ಈ ಬಾರಿ ಮೇಲ್ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ತಾ. ೧೪ ರಂದು ಉತ್ತರ ಸಿಗಲಿದೆ.
ಎಂ.ಪಿ. ಸುಜಾಕುಶಾಲಪ್ಪ ಅವರೋ... ಅಥವಾ ಡಾ. ಮಂತರ್ಗೌಡ ಅವರೋ... ಎಂಬ ಕುರಿತು ಬಿಜೆಪಿ-ಕಾಂಗ್ರೆಸ್ ಮಾತ್ರವಲ್ಲದೆ ಇತರ ಪಕ್ಷಗಳು ಹಾಗೂ ಜಿಲ್ಲೆಯ ಜನರು ಕಾತುರದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿ ಮತದ ಹಕ್ಕು ಹೊಂದಿದ್ದ ಮತದಾರರು ಮಾತ್ರ ಮೌನವಾಗಿದ್ದಾರೆ. ಏಕೆಂದರೆ ಈ ಕದನ ಪರೀಕ್ಷೆಯಲ್ಲಿ ಉತ್ತರ ನೀಡಿರುವವರೇ ಅವರುಗಳು. ಎರಡೂ ಪಕ್ಷ ಹಾಗೂ ಅಭ್ಯರ್ಥಿಗಳು ತಮಗೆ ಯಾರೆಲ್ಲ ಖಚಿತವಾಗಿ ಬೆಂಬಲ ನೀಡಿದ್ದಾರೆ... ಯಾರು ಕೈಕೊಟ್ಟಿರ ಬಹುದು ಎಂಬ ತಳಮಳದಲ್ಲಿದ್ದಾರೆ.
ಮತಬೇಟೆಯಲ್ಲಿನ ಲೆಕ್ಕಾಚಾರ ಗಳು ಸರಿಯಾಗಿ ‘ವರ್ಕ್ಔಟ್’ ಆಗಿದೆಯೇ ಅಥವಾ ಬುಡಮೇಲಾಗಿ ದೆಯೇ ಎಂಬುದು ಸದ್ಯದ ಯಕ್ಷ ಪ್ರಶ್ನೆಯಾಗಿದೆ. ಇವೆಲ್ಲದಕ್ಕೂ ತಾ. ೧೪ ರ ಮಂಗಳವಾರದ ತನಕ ಕಾಯಲೇ ಬೇಕಾಗಿದೆ.
ಈ ನಡುವೆ ಆಯಾ ಪಕ್ಷ ಹಾಗೂ ಅಭ್ಯರ್ಥಿಗಳ ಬೆಂಬಲಿಗರು ತಮ್ಮದೇ ಆದ ವಿಶ್ಲೇಷಣೆಯಲ್ಲಿ ತೊಡಗಿದ್ದು, ‘ಬೆಟ್ಟಿಂಗ್’ ಕೂಡ ಆರಂಭವಾಗಿದೆ ಎಂಬ ಮಾತು ಕೇಳಿಬಂದಿದೆ.
ಈಗಿನ ಮತ ವಿವರದಂತೆ ಮ್ಯಾಜಿಕ್ ನಂ. ೬೬೩
ಪ್ರಸ್ತುತ ನಡೆದಿರುವ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ಒಟ್ಟು ೧೩೨೯ ಮತಗಳ ಪೈಕಿ ೧೩೨೫ ಮತಗಳು ಚಲಾವಣೆಯಾಗಿವೆ. ಮತಪಟ್ಟಿಯಲ್ಲಿ ಹೆಸರು ಹೊಂದಿದ್ದ ಇಬ್ಬರು ನಂತರದಲ್ಲಿ ಮೃತಪಟ್ಟಿದ್ದರೆ ಒಬ್ಬರು ಪೊಲೀಸ್ ಮೊಕದ್ದಮೆಯಿಂದಾಗಿ ಮತಚಲಾಯಿಸಲಾಗಲಿಲ್ಲ. ಮತ್ತೊಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿಲ್ಲ. ಇದರಿಂದಾಗಿ ಚಲಾವಣೆಯಾಗಿರುವ ಒಟ್ಟು ೧೩೨೫ ಮತಗಳ ಪೈಕಿ ಈ ಲೆಕ್ಕಾಚಾರದ ಪ್ರಕಾರ ೬೬೩ ಮತ ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತವಾಗಿದೆ. ಇದರಂತೆ ಸದ್ಯದ ವಿಶ್ಲೇಷಣೆಯಂತೆ ಮ್ಯಾಜಿಕ್ ನಂಬರ್ ೬೬೩.
ಎರಡನೇ ಪ್ರಾಶಸ್ತö್ಯ ಮತ ಲೆಕ್ಕಕ್ಕಿಲ್ಲ
ಈ ಬಾರಿ ನಡೆದ ಚುನಾವಣೆ ಯಲ್ಲಿ ಸ್ಪರ್ಧಾಕಣದಲ್ಲಿದ್ದುದು ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ. ಇದರಿಂದಾಗಿ ನೇರ ಸ್ಪರ್ಧೆ ಇರುವುದ ರಿಂದ ಇಲ್ಲಿ ಎರಡನೇ ಪ್ರಾಶಸ್ತö್ಯ ಮತ ಎಂಬುದು ಮಹತ್ವ ಪಡೆದಿಲ್ಲ. ಚಲಾವಣೆಯಾಗಿರುವ ಮತದಲ್ಲಿ ಶೇ. ೫೧ ರಷ್ಟು (ಅಂದರೆ ಶೇ. ೫೦+೧ರಷ್ಟು) ಮತ ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತವಾಗಿದೆ. ಆದರೆ ಚಲಾವಣೆ ಯಾಗಿರುವ ೧೩೨೫ ಮತಗಳೂ ಲೆಕ್ಕಕ್ಕೆ ಬರಲಿದೆ ಎಂಬು ದನ್ನು ಈಗಾಗಲೇ ಹೇಳಲಾಗದು. ಒಂದು ವೇಳೆ ಕೆಲವು ಮತಗಳು ತಾಂತ್ರಿಕ ತಪ್ಪಿನಿಂದಾಗಿ ತಿರಸ್ಕೃತ ಗೊಂಡ ಪಕ್ಷದಲ್ಲಿ ಸ್ವೀಕೃತವಾಗುವ ಒಟ್ಟು ಮತಗಳನ್ನು ಮಾತ್ರ ಎಣಿಕೆ ಸಂದರ್ಭದಲ್ಲಿ ಪರಿಗಣಿಸಲಾಗು ವುದು. ಒಟ್ಟು ಸ್ವೀಕೃತ ಮತಗಳ ಪೈಕಿ ಲೆಕ್ಕಾಚಾರ ನಡೆಯಲಿದ್ದು, ಇದರಲ್ಲಿ ಶೇ. ೫೧ ಮತ ಗಳಿಸುವ ಅಭ್ಯರ್ಥಿಗೆ ಮೇಲ್ಮನೆ ಪ್ರವೇಶದ ರಹದಾರಿ ಸಿಗಲಿದೆ.
ಈ ಹಿಂದೆ ನಡೆದಿದ್ದ ಚುನಾವಣೆ ಯೊಂದರಲ್ಲಿ
(ಮೊದಲ ಪುಟದಿಂದ) ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು. ಟಿ.ಜಾನ್, ಅರುಣ್ ಮಾಚಯ್ಯ ಹಾಗೂ ಎಸ್.ಜಿ. ಮೇದಪ್ಪ ಅವರುಗಳ ನಡುವಿನ ಸ್ಪರ್ಧೆಯಲ್ಲಿ ಎರಡನೆಯ ಪ್ರಾಶಸ್ತö್ಯ ಮತಕ್ಕೆ ಭಾರೀ ಮಹತ್ವ ಎದುರಾಗಿತ್ತು. ಇದರಂತೆ ಅರುಣ್ ಮಾಚಯ್ಯ ಅವರ ಗೆಲುವು ಸುಲಲಿತವಾಗಿದ್ದನ್ನು ಈ ಸಂದರ್ಭ ಸ್ಮರಿಸಬಹುದಾಗಿದೆ.
ಆದರೆ ಈ ಬಾರಿ ನೇರ ಹಣಾಹಣಿಯ ಕಾರಣದಿಂದಾಗಿ ಹೆಚ್ಚು ಮತ ಪಡೆಯುವ ಅಭ್ಯರ್ಥಿ ವಿಜಯಶಾಲಿಯಾಗಲಿದ್ದಾರೆ.
ತಾ. ೧೦ ರಂದು ನಡೆದಿರುವ ಚುನಾವಣೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮತದಾರರಿಂದ ಉತ್ತಮ ಪ್ರತಿಕ್ರಿಯೆ ಕಂಡುಬAದಿದೆ. ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ. ಕೊನೆಯ ಘಳಿಗೆಯಲ್ಲಿ ಕೆಲವೊಂದು ಒತ್ತಡ-ಸ್ವಇಚ್ಚೆಗೆ ಅಡ್ಡಿಯಾಗುವಂತಹ ಪ್ರಕರಣಗಳು ನಡೆದಿವೆಯಾದರೂ ತಮ್ಮ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರ ಅಭಿಪ್ರಾಯದಂತೆ ಚುನಾವಣೆ ಬಿಜೆಪಿಗೆ ಪೂರಕವಾಗಿದೆ. ನಮ್ಮ ಮತದಾರರೆಲ್ಲರೂ ಮತ ಚಲಾಯಿಸಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವು ಖಚಿತವೆಂದರು. -ಶಶಿ ಸೋಮಯ್ಯ