ಪ್ರತಿಭಟನೆಗೆ ನಿರ್ಧಾರ

ನಾಪೋಕ್ಲು, ಡಿ. ೧೧: ಮಡಿಕೇರಿ ತಾಲೂಕಿನ ೨ನೇ ದೊಡ್ಡ ಪಟ್ಟಣ ಎಂದು ಕರೆಸಿಕೊಳ್ಳುವ ನಾಪೋಕ್ಲು ನತದೃಷ್ಟ ಪಟ್ಟಣವೇ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಈ ಪಟ್ಟಣ ನಾಪೋಕ್ಲು, ಎಮ್ಮೆಮಾಡು, ಬಲ್ಲಮಾವಟಿ, ಕುಂಜಿಲ-ಕಕ್ಕಬ್ಬೆ, ನರಿಯಂದಡ, ಕೊಣಂಜಗೇರಿ, ಹೊದವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೩೦ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಆಸ್ಪತ್ರೆ, ಕಚೇರಿ, ಮಾರುಕಟ್ಟೆ, ಪೊಲೀಸ್ ಠಾಣೆ, ಶಾಲಾ-ಕಾಲೇಜುಗಳಿಗೆ ಎಲ್ಲರೂ ಇಲ್ಲಿಗೆ ಬರಬೇಕಾಗಿದೆ.

ಇಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಸಮುದಾಯ ಆರೋಗ್ಯ ಕೇಂದ್ರವಿದೆ. ಆದರೆ ವೈದ್ಯರು, ತಜ್ಞವೈದ್ಯರ ಕೊರತೆ ಕಾಡುತ್ತಿದೆ. ಸರಕಾರಿ ಪದವಿ ಕಾಲೇಜಿದೆ, ಉಪನ್ಯಾಸಕರು, ಸಿಬ್ಬಂದಿಗಳು ಇಲ್ಲ. ಕರ್ನಾಟಕ ಪಬ್ಲಿಕ್ ಶಾಲೆಯಿದೆ ಶಿಕ್ಷಕರಿಲ್ಲ. ನಾಡ ಕಚೇರಿ ಇದೆ, ಸರ್ವರ್ ಇಲ್ಲ. ಆರಕ್ಷಕ ಠಾಣೆ ಇದೆ ವಸತಿ ಸೌಲಭ್ಯ ಇಲ್ಲ. ಬಿಎಸ್‌ಎನ್‌ಎಲ್ ಕಚೇರಿ ಇದೆ ಬಾಗಿಲು ತೆರೆಯುತ್ತಿಲ್ಲ. ಗ್ರಾಮ ಪಂಚಾಯಿತಿಯ ಸಾರ್ವಜನಿಕ ಶೌಚಾಲಯ ಇದೆ. ಆದರೆ ಇದನ್ನು ಬಳಸಲು ಸಾಧ್ಯವಿಲ್ಲ. ಬೇಕಾದಷ್ಟು ಬಸ್‌ಗಳು ಸಂಚರಿಸುತ್ತವೆ. ಆದರೆ ಬಸ್ ನಿಲ್ದಾಣ ಇಲ್ಲ. ಕಾಫಿ ಮಂಡಳಿ ಕಚೇರಿಯನ್ನು ಮುಚ್ಚಲಾಗಿದೆ. ಉಳಿದಂತೆ ಉಪ ಖಜಾನೆ, ಪಶು ಚಿಕಿತ್ಸಾ ಕೇಂದ್ರ, ಖಾಸಾಗಿ ವಿದ್ಯಾಸಂಸ್ಥೆಗಳು, ರೂ. ೨೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ಕೂಡ ನಿರ್ಮಾಣಗೊಳ್ಳುತ್ತಿದೆ. ಪೆಟ್ರೋಲ್ ಬಂಕ್‌ಗಳು, ವಿಶಾಲವಾದ ಕ್ರೀಡಾಂಗಣಗಳು, ಮಾರುಕಟ್ಟೆ ಎಲ್ಲವೂ ಇದ್ದು, ಇಲ್ಲಿಗೆ ಆಗಮಿಸಲು ರಸ್ತೆಗಳು ಮಾತ್ರ ಸರಿಯಾಗಿಲ್ಲ.

ನಾಪೋಕ್ಲು ಪಟ್ಟಣಕ್ಕೆ ಮಡಿಕೇರಿ, ಭಾಗಮಂಡಲ, ವೀರಾಜಪೇಟೆ, ಪಾರಾಣೆ, ಮೂರ್ನಾಡು ಪಟ್ಟಣಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಿವೆ. ಆದರೆ, ಯಾವ ರಸ್ತೆಯಲ್ಲಿ ಸಂಚರಿಸಿದರೂ ಗುಂಡಿ ರಸ್ತೆಗಳನ್ನು ದಾಟಿಯೇ ನಾಪೋಕ್ಲು ಪಟ್ಟಣಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಪಟ್ಟಣದೊಳಗಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗಿರಲಿ, ಜನ ಓಡಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ದುರಸ್ತಿಗೊಳಿಸುವಂತೆ ನಾಪೋಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಜಯಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ದುರಸ್ತಿಗೊಳಿಸಲು ಒಂದು ವಾರದ ಗಡುವು ನೀಡಿದ್ದಾರೆ. ತಪ್ಪಿದ್ದಲ್ಲಿ ನಾಪೋಕ್ಲು ಪಟ್ಟಣ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಚೇಂಬರ್ ಆಫ್ ಕಾಮರ್ಸ್ ಬಂದ್‌ಗೆ ಬೆಂಬಲ: ಪಟ್ಟಣ ಬಂದ್‌ಗೆ ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದೆ. ಒಂದು ದಿನದ ವ್ಯಾಪಾರ ನಷ್ಟವಾದರೂ ತೊಂದರೆ ಇಲ್ಲ. ನಮಗೆ ರಸ್ತೆ ಮುಖ್ಯ ಎನ್ನುತ್ತಾರೆ ವರ್ತಕರು ಮತ್ತು ವ್ಯಾಪಾರಸ್ಥರು. ಅವರೊಂದಿಗೆ ಜಯಕರ್ನಾಟಕ ಸಂಘಟನೆ, ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಸಾರ್ವಜನಿಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಬಂದ್‌ಗೆ ಅವಕಾಶ ನೀಡುವದೇ ಅಥವಾ ಅದಕ್ಕೆ ಮುನ್ನವೇ ರಸ್ತೆ ಕಾಮಗಾರಿಗೆ ಕ್ರಮಕೈಗೊಳ್ಳುತ್ತದೆಯೋ ಎಂದು ಕಾದುನೋಡಬೇಕಾಗಿದೆ. ರಾಜಕೀಯ ಘಟಾನುಘಟಿಗಳು ಹುಟ್ಟಿ ಬೆಳೆದ ನಾಡಾದರೂ ನಾಪೋಕ್ಲನ್ನು ನಿರ್ಲಕ್ಷಿö್ಯಸಲಾಗುತ್ತಿದೆ ಎನ್ನುವದು ಸಾರ್ವಜನಿಕರ ಆರೋಪ.

- ಪಿ.ವಿ. ಪ್ರಭಾಕರ್