ಕಣಿವೆ, ಡಿ. ೧೧ : ಹೆದ್ದಾರಿ ಬದಿಗಳು ಇರುವುದೇ ಕಸ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆಯಲು ಎಂದು ಹಲವರು ಬಾವಿಸಿದಂತಿದೆ. ಏಕೆಂದರೆ ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುವ ಯಡವನಾಡಿನಿಂದ ಆರಂಭಿಸಿ ಕಾರೇಕೊಪ್ಪದ ವರೆಗೂ ಅರಣ್ಯದೊಳಗಿನ ಹೆದ್ದಾರಿಯಂಚಿನ ಇಕ್ಕೆಲಗಳ ಉದ್ದಕ್ಕೂ ಕೆಲವು ದುರುಳರು ವ್ಯಾಪಕವಾಗಿ ಕಸ ಹಾಗೂ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ತಂದು ಬಿಸಾಕಿರುವ ಚಿತ್ರಣ ಕಂಡು ಬರುತ್ತದೆ.
ವನ್ಯಪ್ರಾಣಿಗಳ ಆವಾಸ ಸ್ಥಾನವಾಗಿರುವ ಇಲ್ಲಿನ ಅರಣ್ಯದ ಪರಿಸರವನ್ನು ಕಲುಷಿತಗೊಳಿಸಲಾಗಿದೆ. ಅಂದರೆ ಹಳೆಯ ಬಟ್ಟೆಗಳು, ಮದ್ಯದ ಖಾಲಿ ಬಾಟಲಿಗಳು, ಮಾಂಸದ ತ್ಯಾಜ್ಯಗಳು, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿಸಿ ತಂದು ಇಲ್ಲಿ ಎಸೆಯಲಾಗಿದೆ. ಹೀಗೆ ಬಿಸಾಕಿರುವ ಚೀಲಗಳನ್ನು ಬೀಡಾಡಿ ಶ್ವಾನಗಳು, ಕಾಡುಹಂದಿ ಮೊದಲಾದ ಪ್ರಾಣಿಗಳು ಎಳೆದಾಡುವ ಕಾರಣ ತ್ಯಾಜ್ಯಗಳು ರಸ್ತೆಯ ಬದಿಯುದ್ದಕ್ಕೂ ಬಿದ್ದಿರುವುದು ಕಾಣಸಿಗುತ್ತದೆ.
ಅರಣ್ಯ ಇಲಾಖೆ ಅಸಡ್ಡೆ
ಅರಣ್ಯ ಪರಿಸರದ ಹೆದ್ದಾರಿಯುದ್ದಕ್ಕೂ ಕಸ ತ್ಯಾಜ್ಯಗಳನ್ನು ಬಿಸಾಕಿದ ಪರಿಣಾಮ ಹಚ್ಚ ಹಸಿರಿನಿಂದ ಸುಂದರವಾಗಿದ್ದ ಅರಣ್ಯ ಪರಿಸರ ಕಲುಷಿತವಾಗುತ್ತಿದ್ದರೂ ಕೂಡ ಸೋಮವಾರಪೇಟೆ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏಕೆ ಅಸಡ್ಡೆ ತಾಳಿದ್ದಾರೆ ಎಂಬುದು ಇಲ್ಲಿ ಸಂಚರಿಸುವ ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಸದ ಚೀಲ ಬಿಸಾಡುವವರನ್ನು ಕಂಡು ಹಿಡಿದು ಹೆಡೆಮುರಿಕಟ್ಟಿ ದಂಡ ವಿಧಿಸಿದ್ದರೆ ಇಲ್ಲಿನ ಪರಿಸರ ಇಷ್ಟೊಂದು ಕಲುಷಿತವಾಗುತ್ತಿತ್ತೇ ? ಎಂದು ಹಲವರ ವಾದವಾಗಿದೆ. ಕೂಡಲೇ ಅರಣ್ಯ ಸಿಬ್ಬಂದಿಗಳು ಬೆಳಗ್ಗೆ ಹಾಗೂ ಸಂಜೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಪ್ಪಿತಸ್ತರನ್ನು ಕಂಡು ಹಿಡಿಯಬೇಕು. ಹಾಗೆಯೇ ಇಲ್ಲಿ ಕಲುಷಿತಗೊಂಡಿರುವ ಅರಣ್ಯ ಪರಿಸರವನ್ನು ಕೂಡಲೇ ಸ್ವಚ್ಛಗೊಳಿಸಬೇಕಿದೆ.
ಇದೇ ರೀತಿಯಲ್ಲಿ ಹೆಚ್ಚು ಸಂಚರಿಸುವ ಪ್ರವಾಸಿಗರು ಹಾಗೂ ಪ್ರಯಾಣಿಕರು ಆನೆಕಾಡು ಅರಣ್ಯ ಪರಿಸರದಲ್ಲೂ ಈ ಹಿಂದೆ ಕಸ ತ್ಯಾಜ್ಯ ಬಿಸಾಕುತ್ತಿದ್ದರು. ಆದರೆ ಕುಶಾಲನಗರದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಸ್ತು ತಿರುಗುವ ಮೂಲಕ ಆನೆಕಾಡು ಹೆದ್ದಾರಿಯ ಪರಿಸರವನ್ನು ಕಸ ತ್ಯಾಜ್ಯ ಮುಕ್ತವಾಗಿಸಿದ್ದಾರೆ.
ಅಲ್ಲದೇ ಯಾವುದೇ ವಾಹನಗಳು ಅನಗತ್ಯವಾಗಿ ನಿಲುಗಡೆಯಾಗದಂತೆ ಹಾಗೂ ಊಟ ಉಪಹಾರ ಮಾಡಿ ತ್ಯಾಜ್ಯ ಬಿಸಾಕದಂತೆಯೂ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದಾರೆ. ಇದೇ ರೀತಿಯಲ್ಲಿ ಯಡವನಾಡು ಸೋಮವಾರಪೇಟೆ ಹೆದ್ದಾರಿಯ ಅರಣ್ಯ ಪರಿಸರದಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಎಚ್ಚರಿಕೆಯ ಫಲಕಗಳನ್ನು ಹಾಕುವ ಮೂಲಕ ಕಸ ಎಸೆಯುವ ದುರುಳರನ್ನು ನಿಗ್ರಹಿಸಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.