ಕಣಿವೆ, ಡಿ. ೧೦: ವಾರದಿಂದ ವರುಣ ಬಿಡುವು ಕೊಟ್ಟಿರುವ ಹಿನ್ನೆಲೆ ಕೃಷಿಕರು ಮತ್ತೆ ಜೋಳದ ಬೀಜ ಬಿತ್ತನೆಗೆ ಮುಂದಾಗಿದ್ದಾರೆ.
ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ ಮೊದಲಾದ ಗ್ರಾಮಗಳ ಕೃಷಿಕರು ಇದೀಗ ಜೋಳದ ಬೆಳೆಗೆ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಸೀಗೆಹೊಸೂರು ಗ್ರಾಮದ ಪುಟ್ಟಯ್ಯ ಭಾಗ್ಯ ಎಂಬ ಕೃಷಿಕರು ‘ಶಕ್ತಿ’ಯೊಂದಿಗೆ ಮಾತನಾಡಿ, ನಾವು ಈ ಮೊದಲು ಎರಡು ಎಕರೆ ಭೂಮಿಯಲ್ಲಿ ಕೆಸವನ್ನು ಬೆಳೆದಿದ್ದೆವು. ಆದರೆ ಮಳೆ ವಿಪರೀತವಾಗಿ ಸುರಿದ ಕಾರಣ ಬೆಳೆ ನೆಲಕಚ್ಚಿತು. ಬಡ್ಡಿ ಸಾಲ ಮಾಡಿ ಹಣ ತಂದು ಖರ್ಚು ಮಾಡಿದ್ದೆವು. ಆದರೆ ಏನು ಮಾಡೋದು ರೈತರ ಜೀವನವೇ ಹಾಗಲ್ಲವಾ.. ಒಳ್ಳೆಯ ಬೆಳೆ ಬಂದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಹೀಗೆ ಬೆಳೆಗಳೆಲ್ಲಾ ಹಾಳಾಗುತ್ತವೆ. ಕೂಲಿ ಕಾರ್ಮಿಕರ ಕೂಲಿಯ ಹಣವೂ ದುಪ್ಪಟ್ಟಾಗಿದೆ. ಬಿತ್ತನೆ ಬೀಜ, ರಸಗೊಬ್ಬರದ ಬೆಲೆಯೂ ಕೂಡ ಹೆಚ್ಚಳವಾಗಿದೆ. ನಮಗೆ ಬೆಳೆ ನಷ್ಟವಾದಾಗ ಯಾರೂ ಕೂಡ ನಮ್ಮ ನೆರವಿಗೆ ಬರಲ್ಲಾ ಎಂದು ಕೃಷಿಕ ಮಹಿಳೆ ಭಾಗ್ಯ ವಿಷಾದಿಸಿದರು. ಈ ಹಿಂದೆ ಬೆಳೆದ ಕೆಸದ ಬೆಳೆಯನ್ನು ಫಸಲು ಸಹಿತ ಉಳುಮೆ ಮಾಡಿ ಅದರ ಮೇಲೆ ಜೋಳದ ಬಿತ್ತನೆಗೆ ಈ ಕೃಷಿಕ ಮಹಿಳೆ ಮುಂದಾಗಿದ್ದಾರೆ.
ಇನ್ನಾದರೂ ಗ್ರಾಮೀಣ ಪ್ರದೇಶಗಳಿಂದ ಪಂಚಾಯಿತಿಗೆ ಚುನಾಯಿತರಾಗಿರುವ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರದ ವಿವಿಧ ಇಲಾಖಾ ಅಧಿಕಾರಿಗಳು ಕೂಡ ಗ್ರಾಮದತ್ತ ಮುಖ ಮಾಡಬೇಕು. ಕನಿಷ್ಟವೂ ಮಾಹಿತಿ ಇಲ್ಲದ ಸರ್ಕಾರದ ಪರಿಹಾರದ ಯೋಜನೆಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯವಾದ ಮಾಹಿತಿಯನ್ನು ನೀಡಬೇಕಾದ ತುರ್ತು ಅನಿವಾರ್ಯತೆ ಇದೆ.
- ಕೆ.ಎಸ್. ಮೂರ್ತಿ