ಸಿದ್ದಾಪುರ, ಡಿ. ೧೦: ರೀಬಿಲ್ಡ್ ಕೊಡಗು ಸಂಸ್ಥೆಯ ವತಿಯಿಂದ ಅಮ್ಮತ್ತಿ ಪ್ರೌಢಶಾಲೆಗೆ ನೀಡಲಾದ ಗ್ರಂಥಾಲಯವನ್ನು ಹಿರಿಯರಾದ ದೇವಣಿರ ಪಾರ್ವತಿ ಅಪ್ಪಚ್ಚು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ ಸಂಚಾಲಕ ಕೆ.ಎ. ಕುಶಾಲಪ್ಪ, ವಿದ್ಯಾರ್ಥಿಗಳಲ್ಲಿ ಓದುವ ಗುಣ ಹೆಚ್ಚಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಸುಮಾರು ೨೫೦೦ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಉದಾರವಾಗಿ ನೀಡಿದ್ದೇವೆ ಎಂದರು.
ವೀರಾಜಪೇಟೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಯಲ್ಲಪ್ಪ ಪೂಜಾರ್ ಮಾತನಾಡಿ, ಇತ್ತೀಚೆಗೆ ಮೊಬೈಲ್‌ನಲ್ಲೇ ಓದುವುದು ಹೆಚ್ಚಾಗಿದೆ. ಆದರೆ ಪುಸ್ತಕದಲ್ಲಿ ಓದುವುದು ಉತ್ತಮ. ರೀಬಿಲ್ಡ್ ಕೊಡಗು ಸಂಸ್ಥೆ ವತಿಯಿಂದ ಶಾಲೆಗೆ ಸುಮಾರು ೨೫೦೦ ಪುಸ್ತಕಗಳು ಲಭಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ದೊಡ್ಡತಿಮ್ಮಯ್ಯ ಮಾತನಾಡಿ, ಇಂಗ್ಲೀಷ್ ಸೇರಿದಂತೆ ಕನ್ನಡ ಪುಸ್ತಕಗಳೂ ಇದ್ದು, ಪ್ರತಿ ಶನಿವಾರ ಮಕ್ಕಳು ಹೆಸರು ನೋಂದಾಯಿಸಿ, ಪುಸ್ತಕವನ್ನು ಓದಲು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದೆಂದರು.
ಇದೇ ಸಂದರ್ಭ ರೀಬಿಲ್ಡ್ ಕೊಡಗು ತಂಡದ ಪ್ರಮುಖರಾದ ರಾಧಾ ಪಾಲಂದಿರ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು. ವೇದಿಕೆಯಲ್ಲಿ ಪ್ರೌಢಶಾಲೆಯ ನಿರ್ದೇಶಕ ಸುಗುಣಾ, ಗೌರವ ಕಾರ್ಯದರ್ಶಿ ವಿನು ಪೂವಯ್ಯ, ಪ್ರಮುಖರಾದÀ ಬೋಜಮ್ಮ ಇದ್ದರು. ವೀಣಾ ತಂಡ ಪ್ರಾರ್ಥಿಸಿ, ಶಿಕ್ಷಕಿ ಅಕ್ಕಮ್ಮ ವಂದಿಸಿದರು.