ಕೂಡಿಗೆ, ಡಿ. ೧೦: ಕೂಡಿಗೆ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೇಂದ್ರ ಜಲ ಜೀವನ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕೇಂದ್ರದ ತಂಡ ಅಧಿಕಾರಿಗಳು ಹೆಬ್ಬಾಲೆಯಲ್ಲಿ ಜಲ ಜೀವನ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ನೀರಿನ ಸಂಗ್ರಹ ಕೇಂದ್ರ ಮತ್ತು ಸರಬರಾಜು ವ್ಯವಸ್ಥೆಯನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ತಂಡದ ಮುಖ್ಯಸ್ಥ ಚಕ್ರವರ್ತಿ ಮತ್ತು ರತನ್‌ಕುಮಾರ್ ತಂಡ ಮೊದಲು ಹೆಬ್ಬಾಲೆಯಲ್ಲಿ ಈಗಾಗಲೇ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯ ವತಿಯಿಂದ ನಿರ್ಮಾಣ ಮಾಡಿ ನಂತರ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರಿನ ವಿಭಾಗಕ್ಕೆ ವಹಿಸಿರುವ ಬೃಹತ್ ಪ್ರಮಾಣದ ನೀರಿನ ಟ್ಯಾಂಕ್ ಮತ್ತು ಕಾವೇರಿ ನದಿಯಿಂದ ನೀರನ್ನು ಎತ್ತುವ ಸ್ಥಳಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು. ನಂತರ ಹೆಬ್ಬಾಲೆ ಗ್ರಾಮ ಮಧ್ಯ ಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ, ನದಿಯ ನೀರು ಶುದ್ಧೀಕರಣಗೊಂಡು ನಂತರ ಕುಡಿಯುವ ನೀರಿನ ಸರಬರಾಜಿಗೆ ಹೋಗುವ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ನಂತರ ಕೆಲವು ಬದಲಿ ವ್ಯವಸ್ಥೆಗಳ ಬಗ್ಗೆ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ನಂತರ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಜಲ ಜೀವನ್ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಮನೆ ಮನೆಗೆ ನೀರು ಒದಗಿಸಲು ಅಳವಡಿಕೆ ಮಾಡಿರುವ ನೂತನ ಪೈಪ್ ಲೈನ್ ಬಗ್ಗೆ ಪರಿಶೀಲನೆ ನಡೆಸಿ ನಿಯಮಾನುಸಾರವಾಗಿ, ಮತ್ತು ಟೆಂಡರ್ ಪ್ರಕ್ರಿಯೆ ಮೂಲಕ ಅದರ ಅನುಗುಣವಾಗಿ ಯೋಜನೆಯನ್ನು ಪರಿಪೂರ್ಣತೆಯನ್ನು ಮಾಡುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಅಧಿಕಾರಿಗಳಿಗೆ ಸಮರ್ಪಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕುಡಿಯುವ ನೀರು ಯೋಜನೆಯ ಮೈಸೂರು ವಿಭಾಗೀಯ ಅಭಿಯಂತರ ಶಿವಪ್ರಸಾದ್, ಅಭಿಯಂತರ ಕೃಷ್ಣಮೂರ್ತಿ, ಸಹಾಯಕ ಅಭಿಯಂತರ ಜವರೇಗೌಡ, ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಕುಮಾರ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಸದಸ್ಯರುಗಳಾದ ಚಂದ್ರಶೇಖರ್ ಜೋಗಿ, ಪರಮೇಶ್, ಶಿವನಂಜಪ್ಪ ನಾರಾಯಣ, ತನುಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಸೇರಿದಂತೆ ಇನ್ನಿತರರು ಹಾಜರಿದ್ದರು.

- ಕೆ.ಕೆ. ನಾಗರಾಜಶೆಟ್ಟಿ.