ಮಡಿಕೇರಿ, ಡಿ. ೧೧: ಪುರಾತನ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನವೀಕೃತ ಧಾರ್ಮಿಕ ನಗರದ ಉದ್ಘಾಟನಾ ಕಾರ್ಯಕ್ರಮ ತಾ.೧೩ರಂದು (ನಾಳೆ) ನಡೆಯಲಿದೆ ಎಂದು ಕಾರ್ಯಕ್ರಮದ ರಾಜ್ಯ ಸಹ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್ ತಿಳಿಸಿದ್ದಾರೆ.

ಕೊಡಗೂ ಸೇರಿದಂತೆ ದೇಶಾದ್ಯಂತ ಸುಮಾರು ೫೧,೦೦೦ ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಿ, ಅದರಲ್ಲಿ ‘ದಿವ್ಯ ಕಾಶಿ, ಭವ್ಯ ಕಾಶಿ' ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಎಲ್ಲಾ ದೇವಾಲಯಗಳು, ಮಠಗಳು, ಇತರೆ ಧಾರ್ಮಿಕ ಕ್ಷೇತ್ರಗಳಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಜನತೆ ಮನೆಗಳಲ್ಲಿ ದೀಪ ಬೆಳಗಿಸಿ ಶಿವನ ಆರಾಧನೆ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ‘ದಿವ್ಯ ಕಾಶಿ, ಭವ್ಯ ಕಾಶಿ'ಯ ಕನಸು ಕಂಡಿದ್ದರು. ಅದರಂತೆ ಶಿವನ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದೆನಿಸಿದ ಕಾಶಿ ವಿಶ್ವನಾಥ ಧಾಮವನ್ನು ಅಭಿವೃದ್ಧಿಪಡಿಸಲಾಗಿದೆ. ನವೀಕೃತ ಧಾರ್ಮಿಕ ಧಾಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ಧರ್ಮಾಚಾರ್ಯರು ಸೇರಿದಂತೆ ಸಾಧು ಸಂತರು, ಬುದ್ಧಿ ಜೀವಿಗಳು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಸಾಮರಸ್ಯ, ಸಮಗ್ರತೆ ಹಾಗೂ ಏಕತೆಯ ಸಂಕೇತವಾಗಲಿದೆ ಎಂದರು.

ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆ ಭಾರತೀಯ ಜನತಾ ಪಾರ್ಟಿಯ ರಾಷ್ಟಿçÃಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಮಟ್ಟದಲ್ಲಿ ದೇಶಾದ್ಯಂತ ಜ.೧೪ರವರೆಗೆ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ನವೀನ್ ಕುಮಾರ್ ತಿಳಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿ, ಕೊಡಗಿನಲ್ಲಿ ಈ ಸಂಬAಧ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದ ಸಂಚಾಲಕರಾಗಿ ತಾನು ಕಾರ್ಯನಿರ್ವಹಿಸಲಿದ್ದು, ಸಹ ಸಂಚಾಲಕರಾಗಿ ಮಹೇಶ್ ತಿಮ್ಮಯ್ಯ, ಮಡಿಕೇರಿ ನಗರ ಸಂಚಾಲಕರಾಗಿ ಉಮೇಶ್ ಸುಬ್ರಮಣಿ, ಸಹ ಸಂಚಾಲಕರಾಗಿ ಅನಿತಾ ಪೂವಯ್ಯ, ಮಡಿಕೇರಿ ತಾಲೂಕು ಸಂಚಾಲಕರಾಗಿ ಕೋಡಿರ ಪ್ರಸನ್ನ, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ಮೋಕ್ಷಿತ್, ಸಹ ಸಂಚಾಲಕರಾಗಿ ಗೌತಮ್, ವೀರಾಜಪೇಟೆ ತಾಲೂಕು ಸಂಚಾಲಕರಾಗಿ ಪ್ರವೀಣ್ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಮಾತನಾಡಿ, ಈ ಕಾರ್ಯಕ್ರಮಕ್ಕೆ ಮಹಿಳಾ ಮೋರ್ಚಾದಿಂದ ಬೆಂಬಲ ನೀಡುವುದಾಗಿ ಹೇಳಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ನಗರಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.