ಕಣಿವೆ, ಡಿ. ೧೦: ಸಾಮಾನ್ಯವಾಗಿ ಸಾರಿಗೆ ಇಲಾಖೆಯ ಚಲಿಸುವ ಬಸ್ ನಿಲ್ಲುವ ಮೊದಲೇ ಆತುರದಲ್ಲಿ ಓಡಿ ಹೋಗಿ ಬಿದ್ದು ಗಾಯಗೊಳ್ಳುವ ಪ್ರಯಾಣಿಕರಿದ್ದಾರೆ. ಇನ್ನೊಂದೆಡೆ ಪ್ರಯಾಣಿಸುವ ಬಸ್‌ಗಳಲ್ಲಿ ಚಾಲಕ ಹಾಕುವ ತಕ್ಷಣದ ಬ್ರೇಕ್‌ನಿಂದಾಗಿಯೂ ಬಸ್‌ಗಳಲ್ಲೇ ಗಾಯಗೊಳ್ಳುವವರಿದ್ದಾರೆ. ಹೀಗೆ ಗಾಯ ಅಥವಾ ನೋವಿಗೆ ಸಿಲುಕುವ ಮಂದಿ ಚಾಲಕನಿಗೆ ಒಂದಿಷ್ಟು ಶಪಿಸಿ ತಮ್ಮ ಚಿಕಿತ್ಸೆ ತಾವೇ ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಚಾಲಕ ಹಾಗೂ ನಿರ್ವಾಹಕ ತಮ್ಮ ಬಸ್‌ನಲ್ಲಿದ್ದ ಮಹಿಳೆಯೋರ್ವರು ಬಿದ್ದು ಗಾಯಗೊಂಡದ್ದಕ್ಕೆ ಬಸ್ಸನ್ನೇ ಆಸ್ಪತ್ರೆವರೆಗೂ ತಂದು ಗಾಯಾಳಿಗೆ ಚಿಕಿತ್ಸೆಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಾರಿಗೆ ಇಲಾಖೆಯ ಕುಶಾಲನಗರ ಮಡಿಕೇರಿ ಷಟಲ್ ಬಸ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದ ಕಾರುಗುಂದದ ಮಹಿಳೆಯೊಬ್ಬರು ಬಸ್‌ನಲ್ಲಿ ಪ್ರಯಾಣಿಸುವಾಗ ಕಾಲು ಜಾರಿ ಬಿದ್ದು ಗಾಯಗೊಂಡ ಕಾರಣಕ್ಕೆ ಬಸ್‌ನ ಚಾಲಕ ಪೂಣಚ್ಚ ಹಾಗೂ ನಿರ್ವಾಹಕ ಉದಯ ಎಂಬವರು ಶುಕ್ರವಾರ ಬೆಳಿಗ್ಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಗಾಯಾಳು ಮಹಿಳೆಯನ್ನು ಕೈಹಿಡಿದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.